ಅಮೆರಿಕ, ಡಿ. 06 (DaijiworldNews/TA): ಆಫ್ರಿಕನ್ - ಅಮೇರಿಕನ್ ಗಾಯಕಿ ಮತ್ತು ಭಾರತದ ಅಭಿಮಾನಿ ಮೇರಿ ಮಿಲ್ಬೆನ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು “ಪ್ರಸ್ತುತ ಜಾಗತಿಕ ರಾಜಕೀಯದ ಅತ್ಯಂತ ಪ್ರಭಾವಶಾಲಿ ಹಾಗೂ ಪ್ರಮುಖ ನಾಯಕ” ಎಂದು ವರ್ಣಿಸಿದ್ದಾರೆ. ನವದೆಹಲಿಯಲ್ಲಿ ನಡೆದ, ಪ್ರಧಾನಿ ಮೋದಿ-ಪುಟಿನ್ ಶೃಂಗಸಭೆಯಲ್ಲಿ ಮೋದಿ ತೋರಿದ ರಾಜತಾಂತ್ರಿಕ ನಿಲುವಿಗೆ ಅವರು ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಿಲ್ಬೆನ್, ಮೋದಿ–ಪುಟಿನ್ ಮಾತುಕತೆ “ಭಾರತ–ರಷ್ಯಾ ನಡುವಿನ ಆಳವಾದ ಕಾರ್ಯತಂತ್ರದ ಮೈತ್ರಿಯ ಸ್ಪಷ್ಟ ಪ್ರತಿರೂಪ” ಎಂದು ಹೇಳಿದರು. “ಈ ಸಭೆ ಎರಡೂ ದೇಶಗಳ ಪರಸ್ಪರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಮೋದಿಯವರ ಕಾರ್ಯತಂತ್ರದ ರಾಜತಾಂತ್ರಿಕತೆಗೆ ಪ್ರಶಂಸೆ : ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ನಿಲುವು ಅತ್ಯಂತ ನಿಯೋಜಿತ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಪರಿಣಾಮಕಾರಿ ಆಗಿತ್ತು ಎಂದು ಮಿಲ್ಬೆನ್ ಮೆಚ್ಚುಗೆ ವ್ಯಕ್ತಪಡಿಸಿದರು. ಪುಟಿನ್ ಅವರು ತೈಲ ಮತ್ತು ರಕ್ಷಣಾ ಸಹಕಾರದ ಮೇಲೆ ಹೆಚ್ಚು ಒತ್ತು ನೀಡಿದ್ದರೆ, ಮೋದಿ ಅವರು ಭಾರತದ ಹಿತಾಸಕ್ತಿಯನ್ನು ಸ್ಪಷ್ಟವಾಗಿ ಮುಂದಿಟ್ಟರು ಎಂದು ಅವರು ತಿಳಿಸಿದರು. ಮೋದಿಯವರ ನಾಯಕತ್ವವು ಅವರನ್ನು ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿ ನಿರ್ಮಿಸಿದೆ ಎಂದು ಮಿಲ್ಬೆನ್ ಹೇಳಿದರು.
ಟ್ರಂಪ್ ಆಡಳಿತದ ಭಾರತ ನಿಲುವಿಗೆ ಟೀಕೆ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡದೊಂದಿಗೆ ಹತ್ತಿರವಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಮಿಲ್ಬೆನ್, ಇತ್ತೀಚಿನ ಟ್ರಂಪ್ ಆಡಳಿತದ ಭಾರತ ಕುರಿತ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಿಲ್ಬೆನ್, ಭಾರತ-ಅಮೆರಿಕಾ ಸಂಬಂಧಗಳನ್ನು ಮರು ಬಲಪಡಿಸುವ ಉದ್ದೇಶದಿಂದ ಟ್ರಂಪ್ ಅವರು ಪ್ರಧಾನಿ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಬೇಕು ಎಂದು ಸಲಹೆ ನೀಡಿದರು. ಅವರ ಪ್ರಕಾರ ಮೋದಿ ಅವರು ರಷ್ಯಾ–ಉಕ್ರೇನ್ ಶಾಂತಿ ಪ್ರಯತ್ನದಲ್ಲಿ “ಮಧ್ಯವರ್ತಿಯಾಗಬಲ್ಲ ವಿಶ್ವದ ಏಕೈಕ ಪ್ರಮುಖ ನಾಯಕ” ಎಂದಿದ್ದಾರೆ.
ಮೋದಿ–ಟ್ರಂಪ್ ದೀರ್ಘಕಾಲದ ಸ್ನೇಹಿತರು : “ಟ್ರಂಪ್ ಮತ್ತು ಮೋದಿ ನಿಜವಾದ ಸ್ನೇಹಿತರು. ಅವರ ನಾಯಕತ್ವ ಶೈಲಿಗಳು ಪರಸ್ಪರ ಪೂರಕವಾಗಿವೆ,” ಎಂದು ಮಿಲ್ಬೆನ್ ಹೇಳಿದರು. ಮೋದಿಯವರ ಇತ್ತೀಚಿನ ರಾಜತಾಂತ್ರಿಕ ಚಟುವಟಿಕೆಗಳು ಅವರ ಜಾಗತಿಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು.
“ಮೋದಿ ತಮ್ಮ ನಾಯಕತ್ವದ ಮೂಲಕ ಎಲ್ಲರನ್ನೂ ಮೀರಿದ್ದಾರೆ. ಅದಕ್ಕಾಗಿ ಅವರನ್ನು ನಾನು ಶ್ಲಾಘಿಸುತ್ತೇನೆ,” ಎಂದು ಮಿಲ್ಬೆನ್ ಹೇಳಿಕೆ ನೀಡಿದ್ಧಾರೆ.