ಕ್ಯಾಲಿಫೋರ್ನಿಯಾ, ಡಿ. 04 (DaijiworldNews/TA): ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿ ಪ್ರದೇಶದಲ್ಲಿ ಅಮೆರಿಕದ ವಾಯುಪಡೆಯ ಥಂಡರ್ಬರ್ಡ್ F-16C ಫೈಟಿಂಗ್ ಫಾಲ್ಕನ್ ಯುದ್ಧವಿಮಾನ ಭೀಕರ ಅಪಘಾತಕ್ಕೀಡಾಗಿದೆ. ತರಬೇತಿ ಅಭ್ಯಾಸದ ವೇಳೆ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕೆ ಬಡಿದಿದ್ದು, ನೆಲಕ್ಕೆ ತಾಕುತ್ತಿದ್ದಂತೇ ಬೆಂಕಿಗೆ ಆಹುತಿಯಾಗಿದೆ.

ಸದ್ಯಕ್ಕೆ ವಾಯುಪಡೆಯು ಅಪಘಾತಕ್ಕೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ವಿಮಾನವು ನಿಧಾನವಾಗಿ ನೆಲಕ್ಕೆ ಇಳಿಯುತ್ತಿರುವಾಗ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತವೆ. ಅಪಘಾತದಲ್ಲಿ ಪೈಲಟ್ ಸುರಕ್ಷಿತನಾಗಿದ್ದಾನೆ ಎನ್ನಲಾಗಿದೆ. ಹೆಚ್ಚಿನ ವಿವರಗಳನ್ನು ವಾಯುಪಡೆ ಶೀಘ್ರದಲ್ಲೇ ಹಂಚಿಕೊಳ್ಳುವ ಸಾಧ್ಯತೆ ಇದೆ.