ಜಕಾರ್ತಾ, ಡಿ. 04 (DaijiworldNews/TA): ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಪರಿಸ್ಥಿತಿ ಹದಗೆಟ್ಟಿದೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ರಸ್ತೆಯೊಂದು ಕುಸಿದು ಹೋಗುತ್ತಿರುವ ನಡುಕ ಹುಟ್ಟಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ವಾರದ ಧಾರಾಕಾರ ಮಳೆಯಿಂದಾಗಿ ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್ ಹಾಗೂ ಮಲೇಷ್ಯಾ ಸೇರಿದಂತೆ ಏಷ್ಯದ ಹಲವು ದೇಶಗಳು ಭಾರೀ ಹಾನಿಗೊಳಗಾಗಿವೆ.

ಪ್ರವಾಹ ಮತ್ತು ಭೂಕುಸಿತದಿಂದ ಈ ದೇಶಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಏಷ್ಯಾದ ಕೆಲವು ಭಾಗಗಳು ಸಂಪೂರ್ಣವಾಗಿ ತತ್ತರಿಸಿವೆ. ಇಂಡೋನೇಷ್ಯಾ ಅತ್ಯಂತ ಹೆಚ್ಚು ನಷ್ಟ ಅನುಭವಿಸಿರುವ ದೇಶವಾಗಿದ್ದು, ಕನಿಷ್ಠ 753 ಮಂದಿ ಸಾವನ್ನಪ್ಪಿದ್ದಾರೆ. ಶ್ರೀಲಂಕಾ 465 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೋಮವಾರ ವಿಪತ್ತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ನಿರ್ಮಾಣಕ್ಕೆ ಅಗತ್ಯ ನೆರವು ಮತ್ತು ಬೆಂಬಲ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಇನ್ನೂ ಘೋಷಿಸಲಾಗಿಲ್ಲ. ಏಷ್ಯಾದ ಹಲವು ಭಾಗಗಳಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತಿದ್ದು, ಹಾನಿಗೊಂಡ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯಗಳಿಗೆ ಸರ್ಕಾರಗಳು ನಿರಂತರ ಶ್ರಮಿಸುತ್ತಿವೆ.