ಹೆಂಗ್ಯಾಂಗ್, ಡಿ. 02 (DaijiworldNews/TA): ಇಂದಿನ ಡಿಜಿಟಲ್ ಯುಗದಲ್ಲಿ ಡೇಟಿಂಗ್ ಆ್ಯಪ್ಗಳ ಪ್ರಭಾವ ದಿನೇದಿನೇ ಹೆಚ್ಚುತ್ತಲೇ ಇದೆ. ಪ್ರೀತಿ ಮತ್ತು ಮದುವೆಯ ಮೌಲ್ಯಗಳು ಬದಲಾಗುತ್ತಿರುವ ಉದಾಹರಣೆಯಾಗಿ ಚೀನಾದ ಹೆಂಗ್ಯಾಂಗ್ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇದೀಗ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಮಹಿಳೆಯನ್ನು ಕೇವಲ ನಾಲ್ಕು ಗಂಟೆಗಳಲ್ಲೇ ಮದುವೆಯಾದ ವ್ಯಕ್ತಿ, ಅದರ ಪರಿಣಾಮವಾಗಿ 18 ದಿನಗಳಲ್ಲೇ ತನ್ನ ಎಲ್ಲಾ ಹಣ, ಉಳಿತಾಯ ಮತ್ತು ಹೂಡಿಕೆಯನ್ನು ಕಳೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, 40 ವರ್ಷದ ಹುವಾಂಗ್ ಝೊಂಗ್ಚೆಂಗ್ ಎಂಬ ವ್ಯಕ್ತಿ ಬ್ಲೈಂಡ್ ಡೇಟ್ ಆ್ಯಪ್ ಮೂಲಕ ಒಬ್ಬ ಮಹಿಳೆಯನ್ನು ಪರಿಚಯಿಸಿಕೊಂಡು, ಕ್ಷಣಾರ್ಧದಲ್ಲಿ ಪ್ರೀತಿಯಲ್ಲಿ ಮುಳುಗಿ ಕೇವಲ ನಾಲ್ಕು ಗಂಟೆ ಮಾತನಾಡಿ ಮದುವೆಯಾಗಿದ್ದರು. ಮದುವೆಯ ಮೊದಲ ವಾರದಲ್ಲೇ ನಿಜ ಬಣ್ಣ ಬಯಲಾಗಿದೆ. ಮದುವೆಯ ನಂತರ ಮಹಿಳೆ ನಿರಂತರವಾಗಿ ಹಣಕ್ಕಾಗಿ ಒತ್ತಾಯಿಸುತ್ತಿದ್ದಳು. ಒಟ್ಟು 30 ಲಕ್ಷ ಯುಆನ್ ಅವರಿಂದ ಬಲವಂತವಾಗಿ ಪಡೆದುಕೊಂಡಳು. ಹಣ ಸಿಗುತ್ತಿದ್ದಂತೆ ಅದನ್ನು ಕೇವಲ 18 ದಿನಗಳಲ್ಲಿ ಖಾಲಿ ಮಾಡಿದ್ದಾಳೆ.
ಹುವಾಂಗ್ ಹೇಳುವಂತೆ- “ಮದುವೆಯ ಮೊದಲ ದಿನ ನಾವು ಹೋಟೆಲ್ನಲ್ಲಿ ಉಳಿದಿದ್ದೆವು. ಅದು ನಮ್ಮ ಸಂಬಂಧದ ಆರಂಭ. ಆದರೆ ಮುಂದಿನ ದಿನದಿಂದಲೇ ಆಕೆಯ ಪ್ರೀತಿ ಹಣದ ಲೆಕ್ಕಾಚಾರಕ್ಕೆ ಬದಲಾಯಿತು. ಪ್ರತಿದಿನ ಹಣ ಕೇಳುತ್ತಿದ್ದಳು. ನನ್ನ ಜೊತೆ ಮಾತನಾಡುವುದು ಕೂಡ ಹಣಕ್ಕಾಗಿ ಮಾತ್ರ. ನಾನು ಎಲ್ಲ ಹೂಡಿಕೆ ಕಳೆದುಕೊಂಡಿದ್ದೇನೆ, ಈಗ ಮಾನಸಿಕವಾಗಿ ಹಿಂಸಿಸುತ್ತಿದ್ದಾಳೆ. ಮುಂದಿನ ಜೀವನ ಹೇಗೆ ಕಳೆಯುವುದು ಎಂಬ ಭಯ ಕಾಡುತ್ತಿದೆ.” ಎಂದು ನೊಂದ ಮಾತುಗಳನ್ನಾಡಿದ್ದಾರೆ.
ಮದುವೆಯ ನಂತರ ದಾಂಪತ್ಯ ಜೀವನದಲ್ಲಿ ಪ್ರೀತಿ, ಆಸಕ್ತಿ ಅಥವಾ ಅನ್ಯೋನ್ಯತೆ ಇರಲಿಲ್ಲ, ಆಕೆಯ ಮನಸ್ಸಿನಲ್ಲಿ ಹಣವೇ ಮುಖ್ಯ ಎನ್ನುವುದು ಹುವಾಂಗ್ ಅವರಿಗೆ ಬಳಿಕ ತಿಳಿದುಬಂದಿದೆ. ಈ ಘಟನೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರು ಡೇಟಿಂಗ್ ಆ್ಯಪ್ಗಳ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.