ಕೊಲಂಬೋ, ಡಿ. 01 (DaijiworldNews/TA): ದಿತ್ವಾ ಚಂಡಮಾರುತದಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹಕ್ಕೆ ಶ್ರೀಲಂಕಾ ತತ್ತರಿಸಿದ್ದು, ಮೃತಪಟ್ಟವರ ಸಂಖ್ಯೆ 334ಕ್ಕೆ ತಲುಪಿದೆ. ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಸುಮಾರು 370 ಮಂದಿ ನಾಪತ್ತೆಯಾಗಿದ್ದು, 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

‘ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಭಾರತವು ರಕ್ಷಣಾ ಮತ್ತು ಮಾನವೀಯ ನೆರವನ್ನು ಮುಂದುವರಿಸುತ್ತಿದ್ದು, 80 ಸದಸ್ಯರ ವಿಶೇಷ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಮೂಲಕ 400 ಭಾರತೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಒಬ್ಬ ಪಾಕ್ ಪ್ರಜೆಯನ್ನು ಸಹ ರಕ್ಷಿಸಲಾಗಿದೆ. ಪೋಲೆಂಡ್, ಬೆಲಾರಸ್, ಇರಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಜರ್ಮನಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ ಮತ್ತು ಯುನೈಟೆಡ್ ಕಿಂಗ್ಡಮ್ನ ಹಲವಾರು ನಾಗರಿಕರು ಕೂಡ ರಕ್ಷಣೆಗೆ ಒಳಗಾಗಿದ್ದಾರೆ.
ಚಂಡಮಾರುತದಿಂದ ಕಲಾನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ರಾಜಧಾನಿ ಕೋಲಂಬೊದ ಪೂರ್ವ ಭಾಗಗಳಿಗೆ ಎಚ್ಚರಿಕೆ ಜಾರಿಗೊಂಡಿದೆ. ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವವರಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಶ್ರೀಲಂಕಾದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಮಳೆ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಲಾಗಿದೆ.