ಇಟಲಿ, ನ. 26 (DaijiworldNews/TA): ದುಡ್ಡಿಗಾಗಿ ಕೆಲವರು ಏನನ್ನೂ ಮಾಡಲು ಹಿಂದೇಟು ಹಾಕುವುದಿಲ್ಲ ಎಂಬುದಕ್ಕೆ ಉತ್ತರ ಇಟಲಿಯಲ್ಲಿ ಸಂಭವಿಸಿದ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. 56 ವರ್ಷದ ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಆಕೆಯಂತೆಯೇ ವೇಷ ಧರಿಸಿ ಸರ್ಕಾರಿ ಕಚೇರಿಯಲ್ಲಿ ಹಾಜರಾದ ಕೃತ್ಯ ಬೆಳಕಿಗೆ ಬಂದಿದೆ.

ದಿ ಗಾರ್ಡಿಯನ್ ವರದಿ ಪ್ರಕಾರ, ಆತನ ತಾಯಿ 2022ರಲ್ಲಿ ಮೃತಪಟ್ಟಿದ್ದರು. ಆದರೆ ಈ ಸತ್ಯವನ್ನು ಆತ ಯಾರಿಗೂ ತಿಳಿಸದೆ, ಶವವನ್ನು ಮನೆಯಲ್ಲಿ ಅಡಗಿಸಿಕೊಂಡು ಪ್ರತಿವರ್ಷ ತಾಯಿಗೆ ಬರುವ ಸಾವಿರಾರು ಯುರೋಗಳ ಪಿಂಚಣಿ ಹಣವನ್ನು ತನ್ನದೇ ಎಂದು ಪಡೆಯುತ್ತಿದ್ದ. ಮಾಂಟುವಾ ಸಮೀಪದ ಬೊರ್ಗೊ ವರ್ಜಿಲಿಯೊ ಪಟ್ಟಣದಲ್ಲಿ ನಡೆದ ಈ ಪ್ರಕರಣ ಈಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ತಾಯಿಯ ಗುರುತಿನ ಚೀಟಿಯ ಕಾಲಾವಧಿ ಮುಗಿದ ಕಾರಣದಿಂದ, ಅದನ್ನು ನವೀಕರಿಸಲು ಆತ ವೃದ್ಧ ಮಹಿಳೆಯಂತೆ ಮೇಕಪ್ ಮಾಡಿ ಕೌನ್ಸಿಲ್ ಕಚೇರಿಗೆ ಹಾಜರಾದ. ಆದರೆ ಮಾತನಾಡುವ ವೇಳೆ ಆತನ ಪುರುಷ ಸ್ವರ ಸಿಬ್ಬಂದಿಗೆ ಅನುಮಾನ ಹುಟ್ಟಿಸಿತು. ತಕ್ಷಣವೇ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದರು.
ಅಧಿಕಾರಿಗಳು ನಿಜವಾದ ಮಹಿಳೆಯ ಫೋಟೋ ಹಾಗೂ ಆತನ ವೇಷಧಾರಣೆ ಹೋಲಿಕೆ ಮಾಡಿದ ನಂತರ ಆತನ ಮನೆಗೆ ಭೇಟಿ ನೀಡಿದರು. ಅಲ್ಲಿ ತಾಯಿಯ ಶವವನ್ನು ಲಾಂಡ್ರಿ ಕೋಣೆಯಲ್ಲಿ ಮರೆಮಾಡಲಾಗಿದ್ದ ವಿಷಯ ಪತ್ತೆಯಾಯಿತು. ಮರಣೋತ್ತರ ಪರೀಕ್ಷೆಯಲ್ಲಿ, ಆಕೆಯ ಸಾವಿನ ಕಾರಣ ಸಹಜ ಸಾವು ಎಂದು ದೃಢಪಟ್ಟಿದೆ. ಬೊರ್ಗೊ ವರ್ಜಿಲಿಯೊದ ಮೇಯರ್ ಫ್ರಾನ್ಸೆಸ್ಕೊ ಅಪೋರ್ಟಿ ಹೇಳುವಂತೆ, ಆ ವ್ಯಕ್ತಿ ತಾಯಿಯಂತೆ ಕಾಣಲು ಸಾಕಷ್ಟು ಪ್ರಯತ್ನಿಸಿದ್ದರೂ, ಹಲವು ಅನೌಪಚಾರಿಕ ಚಲನೆಗಳು ಮತ್ತು ಧ್ವನಿ ಆತನನ್ನು ಬಯಲಿಗೆಳೆದವು.
ಹೆಚ್ಚಿನ ವಿವರಗಳ ಪ್ರಕಾರ, ಆ ವ್ಯಕ್ತಿ ನಿರುದ್ಯೋಗಿಯಾಗಿದ್ದು, ತಾಯಿಯ ಪಿಂಚಣಿಯ ಜೊತೆಗೆ ಆಕೆಗೆ ಸೇರಿದ ಮೂರು ಆಸ್ತಿಗಳ ಆದಾಯ ಬಳಸಿ, ವರ್ಷಕ್ಕೆ ಸುಮಾರು ರೂ 50 ಲಕ್ಷಗಳಷ್ಟು ಹಣ ಗಳಿಸುತ್ತಿದ್ದ. ತಾಯಿಯ ದೇಹ ಕೊಳೆಯದಂತೆ ತಡೆಯಲು ಆತ ಸಿರಿಂಜ್ ಬಳಸಿ ದ್ರವ ಹೊರತೆಗೆದಿದ್ದಾನೆ ಎಂಬ ಗಂಭೀರ ಆರೋಪವೂ ಎದುರಿಸುತ್ತಿದ್ದಾನೆ. ಈ ಘಟನೆ ಇಟಲಿಯಲ್ಲಿ ವ್ಯಾಪಕವಾಗಿ ಖಂಡನೆಗೆ ಕಾರಣವಾಗಿದ್ದು, ತನಿಖೆ ಮುಂದುವರೆದಿದೆ.