International
ಅಬುಧಾಬಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ
- Mon, Nov 24 2025 03:35:29 PM
-
ಅಬುಧಾಬಿ, ನ. 24 (DaijiworldNews/TA): ನವಂಬರ್16ರಂದು ಅಬು ಧಾಬಿಯ ಗ್ಲೋಬಲ್ ಇಂಡಿಯನ್ ಸ್ಕೂಲ್ ಲ್ಲಿ ಅಬು ಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಬಹಳ ವಿಜೃಂಭಣೆಯಿಂದ ಜರುಗಿತು.











ಬದುಕು ಕಟ್ಟಿಕೊಳ್ಳಲು ತಮ್ಮ ಹುಟ್ಟೂರನ್ನು ಬಿಟ್ಟು ಬಂದ ಕನ್ನಡಿಗರೆಲ್ಲ ಒಟ್ಟು ಸೇರಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಚರಿಸುವ ಅನಿವಾಸಿ ಕನ್ನಡಿಗರ ಹಬ್ಬ. 600 ಕ್ಕೂ ಹೆಚ್ಚು ಕನ್ನಡಿಗರು ಸೇರಿದ ಸಂಭಾಂಗಣ. ಕಿಕ್ಕಿರಿದ ಸಂಭಾಂಗಣದಲ್ಲಿ ಪದಾಧಿಕಾರಿಗಳಾದ ಕರ್ನಾಟಕ ಸಂಘದ ಶ್ರೀಕೃಷ್ಣ ಕುಳಾಯಿಯವರ ನಿರೂಪಣೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.
ಭವಾನಿ ಶರ್ಮ ತಂದವರಿಂದ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ , ಅನಿವಾಸಿ ಕನ್ನಡಿಗರ ಸಮೂಹಗಾನದೊಂದಿಗೆ ಸಂಭ್ರಮ ರಂಗೇರಿತು. ವೀಣಾ ಮಲ್ಯ ಮತ್ತು ತಂಡದವರ ಸುಂದರಿಯ ಮದುವೆ ಎಂಬ ಹಾಸ್ಯ ನಾಟಕ ಸಭಿಕರನ್ನು ನಗೆ ಕಡಲಿನಲ್ಲಿ ತೇಲಿಸಿತು. ಮನೋಹರ್ ತೋನ್ಸೆಯವರು ಶ್ರೀ ಕುದ್ರೋಳಿ ಗಣೇಶ್ ರವರ ಪರಿಚಯವನ್ನು ಮಾಡಿದರು. ಅದ್ಭುತವಾದ ತಮ್ಮ ಇಂದ್ರಜಾಲದ (ಮ್ಯಾಜಿಕ್ ) ಮೂಲಕ ಶ್ರೀ ಕುದ್ರೋಳಿ ಗಣೇಶ್ ರವರು ಜನರನ್ನು ಮನರಂಜಿಸಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟರು ಕರ್ನಾಟಕ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾ , ಕನ್ನಡ ನುಡಿಗೆ ಸೇವೆಗೈದವರನ್ನು ನೆನಪಿಸಿಕೊಳ್ಳುತ್ತಾ ಅತಿಥಿಗಳನ್ನು ಸ್ವಾಗತಿಸಿದರು. ಇತ್ತೀಚಿಗೆ ಅಗಲಿದ ಯು.ಎ.ಇ. ಯಲ್ಲಿ ನಾಟಕ ಮತ್ತು ಕನ್ನಡಕ್ಕೆ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪಯ್ಯಾರ್ , ಸಾಲು ಮರದ ತಿಮಕ್ಕ , ಶ್ರೇಷ್ಠ ಸಾಹಿತಿ ಶ್ರೀಯುತ ಎಸ್. ಎಲ್. ಭೈರಪ್ಪವರ ನೆನಪಿಸಿಕೊಂಡು , ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಗಣ್ಯರ ಮತ್ತು ಅಬುಧಾಬಿ ಕರ್ನಾಟಕ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಅರಬ್ ಸಂಯುಕ್ತ ಸಂಸ್ಥಾನದ ಹೆಮ್ಮೆಯ ಕನ್ನಡಿಗರಾದ ಬಿ .ಆರ್.ಶೆಟ್ಟಿಯವರು ಘನ ಅಧ್ಯಕ್ಷತೆ ವಹಿಸಿದ್ದರು . ದುಬಾಯಿ , ಅಲ ಐನ್ , ರಸ್ ಅಲ್ ಕೈಮಾ, ಹೀಗೆ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಿದರು. ಸರ್ವೋತ್ತಮ ಶೆಟ್ಟಿ ಈ ಕಾರ್ಯಕ್ರಮದ ಪ್ರಯೋಜಕರಿಗೆಲ್ಲ ಗೌರವ ನಮನ ಸಲ್ಲಿಸಿ, ಮುಖ್ಯ ಪ್ರಾಯೋಜಕರಾಗಿ ಭಾಗವಹಿಸುವ ಬೇಕಿದ್ದ, ಮಾನವತಾವಾದಿ ರೊನಾಲ್ಡೊ ಕೊಲಾಸೋ ರವರು ಕಾರ್ಯಕ್ರಮಕ್ಕೆ ಬರಲಾಗದಿದ್ದರೂ , ಅವರ ಶುಭ ಹಾರೈಕೆಗಳನ್ನು ಸಭಿಕರಿಗೆ ತಿಳಿಸಿದರು. ಸಭಿಕರ ಮನ ರಂಜಿಸಲಿರುವ ಕುದ್ರೋಳಿ ಗಣೇಶ್ ರವರನ್ನು ಸನ್ಮಾನಿಸಲಾಯಿತು.
ಯು. ಎ. ಇ. ಕನ್ನಡಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ, ಅಬುಧಾಬಿ ಕರ್ನಾಟಕದ ಸಂಘದಿಂದ ಪ್ರತಿ ವರ್ಷ ನೀಡುವ ಹೆಮ್ಮೆಯ ದ. ರಾ. ಬೇಂದ್ರೆ ಪ್ರಶಸ್ತಿಯನ್ನು , ಕನ್ನಡ ಸಂಘ ಅಲ್ ಐನ್ ನ ಶ್ರೀಮತಿ ಸವಿತಾ ನಾಯಕ್ ರವರಿಗೆ ನೀಡಲಾಯಿತು. ಅಬುಧಾಬಿ ಕರ್ನಾಟಕ ಸಂಘದ ಹಿರಿಯ ಪದಾಧಿಕಾರಿಗಳು ಹಾಗು ಲೇಖಕರಾಗಿರುವ ಮನೋಹರ್ ತೋನ್ಸೆಯವರು ಸನ್ಮಾನಿತರ ಪರಿಚಯ ಭಾಷಣ ಮಾಡಿದರು. ಬಿ . ಆರ್ . ಶೆಟ್ಟಿಯವರು , ಸರ್ವೋತ್ತಮ ಶೆಟ್ಟಿಯವರ ಜೊತೆ 40 ವರ್ಷದ ಹಿಂದೆ ಅಲ್ ಐನ್ ಗೆ ಹೋಗಿ ಅಲ್ ಐನ್ ಕರ್ನಾಟಕ ಸಂಘದ ಸ್ಥಾಪನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದನ್ನು ನೆನೆಪಿಸಿಕೊಂಡರು.
ಅಲ್ ಐನ್ ಕರ್ನಾಟಕ ಸಂಘದ ಕಾರ್ಯ ಚಟುವಿಕೆಗೆ ಹಾಗು ಅಲ್ ಐನ್ ಕನ್ನಡಿಗರ ಸೇವೆ ಗೈದ ಸವಿತಾ ನಾಯಕರನ್ನು ವೇದಿಕೆಯಲ್ಲಿದ್ದ ಗಣ್ಯರು ಹಾಗು ಕರ್ನಾಟಕ ಸಂಘದ ಪದಾಧಿಕಾರಿಗಳು ಶಾಲು, ಫಲ ಪುಷ್ಪ , ಹಾರ ಹಾಕಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ಸವಿತಾ ನಾಯಕ್ ಈ ಸನ್ಮಾನಕ್ಕೆ ಧನ್ಯವಾದ ಸಮರ್ಪಿಸಿ , ಇನ್ನಷ್ಟು ಜನರಿಗೆ ಇದು ಪ್ರೇರಣೆಯಾಗಲಿ ಎಂದು ನುಡಿದರು. ಬಿ . ಆರ್ . ಶೆಟ್ಟಿಯವರು ಕನ್ನಡಿಗರೆಲ್ಲ ಒಂದಾಗಿ ಇನ್ನಷ್ಟು ಒಳ್ಳೆಯ ಕೆಲಸ ಮಾಡೋಣ ಎನ್ನುತ್ತಾ ಅಧ್ಯಕ್ಷ ಭಾಷಣ ಮಾಡಿದರು.
ಕನ್ನಡ ಭಾಷೆ ಅನಿವಾಸಿ ಮಕ್ಕಳಿಗೆ ತಲುಪಬೇಕೆನ್ನುವ ಆಶಯದೊಂದಿಗೆ ಅಬುಧಾಬಿಯಲ್ಲಿ ಉಚಿತ ಕನ್ನಡ ಕಲಿಕೆ ಮಾಡುವ ಜಯಲಕ್ಷ್ಮಿ ಭಟ್ ರ ಕನ್ನಡ ವಿದ್ಯಾರ್ಥಿಗಳಿಗೆ ಬಿ. ಆರ್ . ಶೆಟ್ಟಿಯವರ ಅಮೃತ ಹಸ್ತದಿಂದ ಗೌರವ ಪ್ರಮಾಣ ಪತ್ರ ನೀಡಲಾಯಿತು. ಸರ್ವೋತ್ತಮ ಶೆಟ್ಟಿಯವರು ಮಾತೃ ಭಾಷೆಯ ಕಲಿಕೆ ಎಲ್ಲ ಮಕ್ಕಳ ಹಕ್ಕು, ಕನ್ನಡ ಕಲಿಕೆ ಇನ್ನಷ್ಟು ಹೆಚ್ಚಲಿ ಎನ್ನುತ್ತಾ ಅಬುಧಾಬಿಯಲ್ಲಿ ಕನ್ನಡ ಕಲಿಸುವ ಸುರೇಶ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಗಳನ್ನು ಅಭಿನಂದಿಸಿದರು.
ಹತ್ತನೆಯ ಮತ್ತು ಹನ್ನೆರಡನೆಯ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪದಾಧಿಕಾರಿಗಳಾದ ಲೋಯಲ ಪಿಂಟೋ ಮತ್ತು ಅಲ್ತಾಫ್ ರವರು , ಮಕ್ಕಳ ಹೆಸರುಗಳನ್ನೂ ಓದಿ , ಮಕ್ಕಳ ವೇದಿಕೆಗೆ ಕರೆ ತಂದರು. ಅಬುಧಾಬಿಯ ಕನ್ನಡ ಕಲಿಕೆಯ ಮಕ್ಕಳೆಲ್ಲ ಸಮೂಹ ಗಾನ ಹಾಡಿ, ಸಭಿಕರಲ್ಲಿ ಕನ್ನಡದ ಕಿಚ್ಚನ್ನು ಹೆಚ್ಚಿಸಿದರು. ಅನಂತರ ರುಚಿಕರ ಮಧ್ಯಾಹ್ನದ ಭೋಜನ ನಡೆಯಿತು.
ನಂತರ ಮಕ್ಕಳ ಸಮೂಹ ಗಾನ ನಡೆಯಿತು . ನಂತರ ಇನ್ನೊಮ್ಮೆ ಅದ್ಭುತವಾದ ತಮ್ಮ ಇಂದ್ರಜಾಲದ (ಮ್ಯಾಜಿಕ್) ಮೂಲಕ ಕುದ್ರೋಳಿ ಗಣೇಶ್ ರವರು ಜನರನ್ನು ಮನರಂಜಿಸಿದರು. ಅನಂತರ , ರಾಜ್ಯೋತ್ಸವದ ಆಚರಣೆಯ ಮುಖ್ಯ ಆಕರ್ಷಣೆಯಾದ ಜಾನಪದ ನೃತ್ಯ ಸ್ಪರ್ಧೆ ಜರುಗಿತು. ಶ್ರೀಮತಿ ಶ್ರುತಿ ಭಟ್ ರವರು ಜಾನಪದ ನೃತ್ಯ ಸ್ಪರ್ಧೆಯ ನಿರೋಪಣೆ ಮಾಡಿ, ಸ್ಪರ್ಧೆಯ ವಿವರ ನೀಡಿದರು. ಯು. ಎ . ಇ .ಯ ಒಟ್ಟು ಎಂಟು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ಸ್ಥಳೀಯ ಪ್ರತಿಭೆಗಳ ಕಲಾವೈಭವದ ಅನಾವರಣವಾಯಿತು . ಒಂದು ತಂಡಕ್ಕಿಂತ ಇನ್ನೊಂದು ತಂಡ, ಬಹಳ ಅದ್ಭುತವಾಗಿ ನೃತ್ಯ ಮಾಡಿ , ಜನ ಮನ್ನಣೆಗೆ ಕಾರಣವಾಯಿತು.
ಸ್ವಸ್ತಿಕಾ ಮತ್ತು ತಂಡ ಅದ್ಭುತವಾದ ಜಾನಪದ ಸಮೂಹ ಗಾಯನ ಮಾಡಿದರು. ಅನಂತರ ಶೃತಿಕೀರ್ತಿ ತಂಡದವರಿಂದ ಸಮೂಹ ಗಾನ . ಸರ್ವೋತ್ತಮ ಶೆಟ್ಟಿವರು ಕೊನೆಗೆ ಸಮಾರೋಪ ಮಾತುಗಳನ್ನು ಆಡುತ್ತ ಜಾನಪದ ಸಂಸ್ಕೃತಿ ನಮ್ಮ ಬೇರು, ಅದನ್ನು ಉಳಿಸುವ ಎಲ್ಲ ಪ್ರಯತ್ನ ಮಾಡಬೇಕು ಎಂದು ಹೇಳುತ್ತಾ , ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಮೊದಲಿಗೆ ಹೆಂಗಳೆಯರಿಗೆ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಗೆದ್ದವರ ವಿವರಗಳನ್ನು ತಿಳಿಸುತ್ತ ಬಹುಮಾನ ನೀಡಲಾಯಿತು. ಅನಂತರ ಜಾನಪದ ನೃತ್ಯ ಸ್ಪರ್ಧೆಯ ವಿಜೇತರ ಬಹುಮಾನ ನೀಡುವುದರೊಂದಿಗೆ ಪ್ರೇಕ್ಷಕರ ಚಪ್ಪಾಳೆ ಮುಗಿಲು ಮುಟ್ಟಿತು.
ಈ ಎಲ್ಲ ಕಾರ್ಯಕ್ರಮಗಳ ತಾಂತ್ರಿಕ ಸಂಯೋಜನೆಯನ್ನು ಪದಾಧಿಕಾರಿಗಳಾದ ಚೇತನ್ ಗೋಪಾಲ್ ರವರು ಮಾಡಿದರು. ಫೋಟೋಗ್ರಫಿಯನ್ನು ಅಬುಧಾಬಿಯ ಶಿವಣ್ಣ ಗೌಡರು ಮಾಡಿದರು. ಕೊನೆಯಲ್ಲಿ ಸರ್ವೋತ್ತಮ ಶೆಟ್ಟಿಯವರು ಈ ಕಾರ್ಯಕ್ರಮದ ರೂವಾರಿಗಳು, ಕರ್ನಾಟಕ ಪದಾಧಿಕಾರಿಗಳಾದ ಮನೋಹರ್ ತೋನ್ಸೆ, ಸುಧೀರ್ ಶೆಟ್ಟಿ , ವಿಜಯ್ ರಾವ್, ಶ್ರೀಕೃಷ್ಣ ಕುಳಾಯಿ , ಲೋಯಲ ಪಿಂಟೋ , ಅಲ್ತಾಫ್ ಎಂ ಎಸ್ , ಶ್ರೀನಿವಾಸ ಅರಸ್, ಕೃಷ್ಣರಾಜ ರಾವ್, ಚೇತನ್ ಗೋಪಾಲ್ , ಸಂದೀಪ್ ರಾವ್ , ಯತಿರಾಜ್ ಶೆಟ್ಟಿ , ಉಣಕಲ್ ಈಶ್ವರ್ , ಚಂದ್ರು ಪೂಜಾರಿ ಯವರ ಪರಿಚಯವನ್ನು ಸಭಿಕರಿಗೆ ಮಾಡಿದರು.
ಇದು ನಲವತ್ತ ನಾಲ್ಕನೆಯ ವರ್ಷದ ರಾಜ್ಯೋತ್ಸವ ಆಚರಣೆ ಆಗಿದ್ದು , ಅನಿವಾಸಿ ಕನ್ನಡಿಗರೆಲ್ಲ ಸೇರಿ , ಸಂಭ್ರಮಿಸಿ , ಹಬ್ಬದ ವಾತಾವರಣ ಅಂದು ಆ ಸಂಭಾಂಗಣದಲ್ಲಿ ಇತ್ತು . ಸಭಿಕರು ಗಣ್ಯರೊಂದಿಗೆ ಫೋಟೋಗ್ರಫಿ ತೆಗೆಸಿಕೊಂಡರು. ಹೊಸತಾಗಿ ಊರಿಂದ ಬಂದವರ- ಹಳಬರ ನಡುವೆ ಪರಸ್ಪರ ಪರಿಚಯ ವಿಚಾರ ವಿನಿಮಯ ಆಯಿತು. ಅನಿವಾಸಿ ಕನ್ನಡಿಗರ , ಕನ್ನಡತಿಯರ , ಮಕ್ಕಳ ಸಾಂಸ್ಕೃತಿಕ ಪ್ರತಿಭೆಯ ಅನಾವರಣ ನಡೆಯಿತು. ಬೆಳಗ್ಗೆ ಹನ್ನೊಂದರಿಂದ ಸಂಜೆ ಐದುವರೆಯವರೆಗೆ ಸಮಯ ಕಳೆದದ್ದು ಸಭಿಕರಿಗೆ ಅರಿವಾಗಲಿಲ್ಲ. ಮನ ತುಂಬಾ ಕನ್ನಡ ಜಾತ್ರೆಯ ಕಲರವ. ಇದು ಅಬುಧಾಬಿಯ ಕನ್ನಡಿಗರೆಲ್ಲ ಒಂದಾಗಿ ಸೇರಿ ಪಾಲ್ಗೊಳ್ಳುವ ಕರ್ನಾಟಕ ರಾಜ್ಯೋತ್ಸವದ ವೈಭವ.
- ಶ್ರೀಕೃಷ್ಣ ಕುಳಾಯಿ