ಬೀಜಿಂಗ್, ನ. 24 (DaijiworldNews/TA): ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ಇಂದು ಮತ್ತೊಂದು ಅಚ್ಚರಿಯ ಯೋಜನೆಗೆ ಕೈ ಹಾಕಿದೆ. ಅಣು ದಾಳಿಯನ್ನೂ ಸಹಿಸಬಲ್ಲ ಅತ್ಯಾಧುನಿಕ ಕೃತಕ ದ್ವೀಪವನ್ನು ಚೀನಾ ನಿರ್ಮಿಸಲು ಸಜ್ಜಾಗಿದ್ದು, ಇದು 2028ರಿಂದ ಕಾರ್ಯನಿರ್ವಹಿಸಲಿದೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ದ್ವೀಪವನ್ನು ವೈಜ್ಞಾನಿಕ ಸಂಶೋಧನೆಗಾಗಿ ಬಳಸಲಿರುವುದಾಗಿ ಹೇಳಲಾಗಿದ್ದರೂ, ರಹಸ್ಯವಾಗಿ ಇದು ಸೇನಾ ಉದ್ದೇಶಗಳಿಗೂ ಉಪಯೋಗಿಸಬಹುದೆಂಬ ಶಂಕೆ ವ್ಯಕ್ತವಾಗಿದೆ.

ಚೀನಾದ ಪ್ರಸಿದ್ಧ ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯ ಈ ಕೃತಕ ದ್ವೀಪದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದೆ. 78,000 ಟನ್ ತೂಕದ ಈ ದ್ವೀಪವು ಚೀನಾದ ಅತಿದೊಡ್ಡ ವಿಮಾನ ವಾಹಕ ನೌಕೆಯಾದ ಫುಜಿಯಾನ್ನಷ್ಟೇ ದೊಡ್ಡದಾಗಿರಲಿದೆ.138 ಮೀಟರ್ ಉದ್ದ, 85 ಮೀಟರ್ ಅಗಲ, ಮತ್ತು ಡೆಕ್ವು ಸಮುದ್ರ ಮಟ್ಟಕ್ಕಿಂತ 45 ಮೀಟರ್ ಎತ್ತರದಲ್ಲಿ ನಿರ್ಮಿಸಲ್ಪಡಲಿದೆ. ದ್ವೀಪದೊಳಗೆ 238 ಜನರು ನಿರಂತರ 4 ತಿಂಗಳುಗಳ ಕಾಲ ಹೊರ ಜಗತ್ತಿನ ಸಂಪರ್ಕವಿಲ್ಲದೆ ಸುಲಭವಾಗಿ ವಾಸಿಸಬಹುದಾಗಿದೆ.
ಈ ಕೃತಕ ದ್ವೀಪವು 6–9 ಮೀಟರ್ ಎತ್ತರದ ಸಮುದ್ರ ಅಲೆಗಳು, ಉಗ್ರ ಚಂಡಮಾರುತಗಳು ಮತ್ತು ಪರಮಾಣು ಸ್ಫೋಟಗಳ ತೀವ್ರತೆಯನ್ನೂ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಕಾರಣವಾದದ್ದು ಅದರ ನಿರ್ಮಾಣಕ್ಕೆ ಬಳಕೆ ಮಾಡಿದ ಅತಿ ಆಧುನಿಕ ತಂತ್ರಜ್ಞಾನ. ದ್ವೀಪದ ಹೊರಮೈಗೆ ಮೆಟಾಮೆಟೀರಿಯಲ್ಗಳಿಂದ ನಿರ್ಮಿಸಲಾದ ಸ್ಯಾಂಡ್ವಿಚ್ ಪ್ಯಾನಲ್ಗಳು ಅಳವಡಿಸಲಾಗುತ್ತಿವೆ. ಕಾರ್ಬನ್-ಫೈಬರ್ ಬಲವರ್ಧಿತ ಪಾಲಿಮರ್, ಸ್ಟೀಲ್, ಅಲ್ಯುಮಿನಿಯಂ ಸೇರಿರುವ ಆಕ್ಸೆಟಿಕ್ ಲ್ಯಾಟಿಸ್ ಜೇನುಗೂಡಿನ ರಚನೆ ಈ ದ್ವೀಪಕ್ಕೆ ಅಣುಸ್ಫೋಟದ ಶಾಕ್ವೇವ್ಗಳನ್ನೂ ತಡೆದುಕೊಳ್ಳುವ ಶಕ್ತಿ ನೀಡುತ್ತದೆ.
ಪ್ರಸ್ತುತ ಈ ದ್ವೀಪವನ್ನು ಆಳ ಸಮುದ್ರ ಸಂಶೋಧನೆಗಾಗಿ ಮಾತ್ರ ಬಳಸುವುದಾಗಿ ಚೀನಾ ಹೇಳಿದೆ. ಆದರೆ ತಜ್ಞರು, ಚೀನಾದ ಈ “ಗೂಢ ಯೋಜನೆ” ಸೇನಾ ಬಳಕೆಗೆಲ್ಲ ಬಳಸಲ್ಪಡುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸುತ್ತಿದ್ದಾರೆ. ದ್ವೀಪ ನಿರ್ಮಾಣ, ರಕ್ಷಣಾ ತಂತ್ರಜ್ಞಾನ ಮತ್ತು ಸಂಪೂರ್ಣ ಸ್ವಯಂ ಪ್ರಚೋದಿತ ವ್ಯವಸ್ಥೆಯನ್ನು ಅವಲೋಕಿಸಿದಾಗ, ಇದು ವೈಜ್ಞಾನಿಕ ಸಂಶೋಧನೆಯಷ್ಟೇ ಅಲ್ಲ, ರಕ್ಷಣಾ ತಂತ್ರಜ್ಞಾನ ವಿಸ್ತರಣೆಗೂ ದಾರಿ ಮಾಡಿಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಚೀನಾದ ‘ಖತರ್ನಾಕ್ ಪ್ಲಾನ್’ - ಮುಖ್ಯ ಅಂಶಗಳು :
ಶಾಂಘೈನ ಜಿಯಾವೊ ಟಾಂಗ್ ವಿಶ್ವವಿದ್ಯಾಲಯದಿಂದ ಅಣು ದಾಳಿಯನ್ನೂ ತಡೆಯುವ ಕೃತಕ ದ್ವೀಪ ನಿರ್ಮಾಣ
ಹೊರಮೈಗೆ ಅಲ್ಟ್ರಾ-ಸ್ಟ್ರಾಂಗ್ ಸ್ಯಾಂಡ್ವಿಚ್ ಪ್ಯಾನಲ್ನ ಅಳವಡಿಕೆ
ಚಂಡಮಾರುತ, ಭೀಕರ ಅಲೆಗಳು, ಹಾಗೂ ಪರಮಾಣು ಸ್ಫೋಟದ ಶಾಕ್ವೇವ್ಗಳನ್ನು ತಡೆಯಬಲ್ಲ ಸಾಮರ್ಥ್ಯ
78,000 ಟನ್ ತೂಕದ ದ್ವೀಪ - ಚೀನಾದ ಯುದ್ಧ ನೌಕೆಯಷ್ಟೇ ಡೈಮೆನ್ಶನ್
238 ಜನರು 4 ತಿಂಗಳುಗಳಿಗೆ ಹೊರಜಗತ್ತಿನ ಸಂಪರ್ಕವಿಲ್ಲದೆ ವಾಸಿಸಲು ಸಾಧ್ಯತೆ
ವೈಜ್ಞಾನಿಕ ಸಂಶೋಧನೆಗಾಗಿ ಎಂದರೂ, ಸೇನಾ ಉದ್ದೇಶಗಳಿಗೆ ಬಳಸುವ ಶಂಕೆ
ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಈಗ ಜಗತ್ತಿನ ಮಹಾಸಕ್ತಿಗಳ ಕಣ್ಣಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ಇದು ಜಿಯೋಪಾಲಿಟಿಕಲ್ ಚರ್ಚೆಗೆ ಹೊಸ ಇಂಧನ ನೀಡುವುದು ಖಚಿತ.