ಸಿಡ್ನಿ, ನ. 19 (DaijiworldNews/AA): ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಮಹಿಳೆ ಸಮನ್ವಿತಾ ಧಾರೇಶ್ವರ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮಗುವಿಗೆ ಜನ್ಮ ನೀಡಲು ಕೆಲವೇ ಕೆಲವು ವಾರಗಳು ಬಾಕಿ ಉಳಿದಿದ್ದವು. ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ ಹಾರ್ನ್ಸ್ಬೈಯ ಜಾರ್ಜ್ ಸ್ಟ್ರೀಟ್ನಲ್ಲಿ ಧಾರೇಶ್ವರ್ ಮತ್ತು ಅವರ ಕುಟುಂಬವು ಪಾದಚಾರಿ ಮಾರ್ಗವನ್ನು ದಾಟಲು ಪ್ರಯತ್ನಿಸಿತ್ತು. ಆ ಸಮಯದಲ್ಲಿ ಕಿಯಾ ಕಾರ್ನಿವಲ್ ಕಾರು ಕಾರು ನಿಧಾನಗೊಳಿಸಿತ್ತು, ಆದರೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆ ಡಿಕ್ಕಿ ಪರಿಣಾಮ ಕಿಯಾ ಕಾರು ಮುಂದಕ್ಕೆ ದೂಡಿದಂತಾಗಿ ಪಾರ್ಕ್ ಕಡೆಗೆ ದಾಟುತ್ತಿದ್ದ ಮೂವರಿಗೂ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸಮನ್ವಿತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸಮನ್ವಿತಾ ಹಾಗೂ ಅವರ ಗರ್ಭದಲ್ಲಿರುವ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಡಬ್ಲ್ಯೂ ಕಾರನ್ನು ಓಡಿಸುತ್ತಿದ್ದ 19 ವರ್ಷದ ಚಾಲಕ ಆರನ್ ಪಾಪಜೋಗ್ಲುನನ್ನು ಪೊಲೀಸರು ಬಂಧಿಸಿದ್ದಾರೆ. ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಆರೋಪದ ಅಡಿ ಕೇಸ್ ದಾಖಲಾಗಿದೆ. ಅಪಘಾತ ಮಾಡಿದ ಬಿಎಂಡಬ್ಲ್ಯೂ ಚಾಲಕನಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.