ಮೆಕ್ಕಾ, ನ. 17 (DaijiworldNews/AA): ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದು ಕನಿಷ್ಠ 42 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿ, ಅದೃಷ್ಟವಶಾತ್ ಓರ್ವ ಅಪಾಯದಿಂದ ಪಾರಾದ ಘಟನೆ ಸೌದಿ ಅರೇಬಿಯಾದ ಮೆಕ್ಕಾ ಬಳಿಯ ಅಲ್ ಮುಫ್ರಿಹಾತ್ನಲ್ಲಿ ಸೋಮವಾರ ನಸುಕಿನ ಜಾವ 1: 30ಕ್ಕೆ ನಡೆದಿದೆ.

ಹೈದರಾಬಾದ್ ಮೂಲದ ನಿವಾಸಿ ಮೊಹಮ್ಮದ್ ಅಬ್ದುಲ್ ಶೋಯೆಬ್ (24) ಬದುಕುಳಿದ ಪ್ರಯಾಣಿಕ. ಬಸ್ ಅಪಘಾತ ಸಂಭವಿಸಿದ ವೇಳೆ ಶೋಯೆಬ್ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಎನ್ನಲಾಗಿದೆ. ಸದ್ಯ ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಶೋಯೆಬ್ನನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆಕ್ಕಾದಲ್ಲಿ ತಮ್ಮ ಉಮ್ರಾ ವಿಧಿಗಳನ್ನು ಪೂರ್ಣಗೊಳಿಸಿ ಮದೀನಾಕ್ಕೆ ಪ್ರಯಾಣಿಕರು ತೆರಳುತ್ತಿದ್ದರು. ಬಸ್ಸಿಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿಹೊತ್ತಿಕೊಂಡಿದೆ. ಅಪಘಾತದ ವೇಳೆ ಪ್ರಯಾಣಿಕರು ನಿದ್ರೆ ಮಂಪರಿನಲ್ಲಿದ್ದರು. ಹೀಗಾಗಿ 42 ಯಾತ್ರಿಕರು ಸಜೀವ ದಹನವಾಗಿದ್ದಾರೆ. ಪವಾಡ ಎಂಬಂತೆ ಶೋಯೆಬ್ ಮಾತ್ರ ಬದುಕುಳಿದಿದ್ದಾನೆ.
ಮೃತಪಟ್ಟವರು ಹೈದರಾಬಾದ್ ಮೂಲದವರು ಎನ್ನಲಾಗುತ್ತಿದೆ. ಇದರಲ್ಲಿ ಒಂದೇ ಕುಟುಂಬದ ಏಳು ಸದಸ್ಯರು, ಮತ್ತೊಂದು ಕುಟುಂಬದ ಎಂಟು ಸದಸ್ಯರು ಇದ್ದರು. ಅಪಘಾತದಲ್ಲಿ ಇವರೆಲ್ಲಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದುರಂತದಲ್ಲಿ 21 ಮಹಿಳೆಯರು, 11 ಮಂದಿ ಮಕ್ಕಳು ಮೃತಪಟ್ಟಿದ್ದಾರೆ.
ಸದ್ಯ ಘಟನೆ ಸಂಬಂಧ ಕೇಂದ್ರ ಸರ್ಕಾರ ಸಹಾಯವಾಣಿ ತೆರೆದಿದ್ದು, ಮೃತ ಕುಟುಂಬಸ್ಥರ ಮಾಹಿತಿ ಪಡೆಯುತ್ತಿದೆ. ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದ್ದರಿಂದ ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.