ಮೆಕ್ಸಿಕೋ ಸಿಟಿ, ನ. 16 (DaijiworldNews/AK):ನೇಪಾಳದ ಬಳಿಕ ಮೆಕ್ಸಿಕೋದಲ್ಲಿ ಸರ್ಕಾರದ ವಿರುದ್ಧ Gen-Z ಗಳು ಪ್ರತಿಭಟನೆಗೆ ಇಳಿದಿದ್ದಾರೆ. ಹೆಚ್ಚುತ್ತಿರುವ ಅಪರಾಧ, ಭ್ರಷ್ಟಾಚಾರ ಮತ್ತು ಭಾರೀ ಹಿಂಸಾಚಾರವನ್ನು ಖಂಡಿಸಿ ಮೆಕ್ಸಿಕೋ ಸಿಟಿಯಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರ ಸರ್ಕಾರವು ಡ್ರಗ್ ಕಾರ್ಟೆಲ್ ಚಟುವಟಿಕೆಗಳನ್ನು ನಿಗ್ರಹಿಸಲು ವಿಫಲವಾಗಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.

ಮೈಕೋಕಾನ್ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಸಕ್ರಿಯ ಅಭಿಯಾನವನ್ನು ಮುನ್ನಡೆಸುತ್ತಿದ್ದ ಮೇಯರ್ ಕಾರ್ಲೋಸ್ ಮಾಂಜೊ ಅವರ ಹತ್ಯೆಯ ನಂತರ ಪ್ರತಿಭಟನೆ ಈಗ ದೇಶಾದ್ಯಂತ ಹರಡಿದೆ. ಯುವ ಜನತೆಗೆ ಹೋರಾಟಕ್ಕೆ ವಿರೋಧ ಪಕ್ಷಗಳ ನಾಯಕರಿಂದ ಬೆಂಬಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲೂ ಬೆಂಬಲ ಸಿಕ್ಕಿದ್ದರಿಂದ ಪ್ರತಿಭಟನೆಗೆ ಈಗ ಭಾರೀ ಬಲ ಬಂದಿದೆ.
ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲುಗಳು, ಪಟಾಕಿ ಎಸೆದ ಪರಿಣಾಮ ಇದು ವಿಕೋಪಕ್ಕೆ ತಿರುಗಿತು. ಭದ್ರತಾ ಪಡೆಗಳು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ನಿಯಂತ್ರಿಸಿದ್ದಾರೆ.
1990 ರ ದಶಕದ ಅಂತ್ಯದಿಂದ 2010 ರ ದಶಕದ ಆರಂಭದವರೆಗೆ ಜನಿಸಿದವರನ್ನು Gen-Z ಗಳು ಎಂದು ಕರೆಯಲಾಗುತ್ತದೆ. ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮ ನಿಷೇಧದ ನಂತರ ನೇಪಾಳದಲ್ಲಿ ನಡೆದ ಬೃಹತ್ ಜೆನ್-ಝಡ್ ಪ್ರತಿಭಟನೆಗಳು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಗೆ ಕಾರಣವಾಗಿತ್ತು.