ಶಾರ್ಜಾ, ನ. 11 (DaijiworldNews/AK): ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಯುಎಇ ಮೂಲದ ಉದ್ಯಮಿ ಮತ್ತು ಸಮಾಜ ಸೇವಕ ರೊನಾಲ್ಡ್ ಮಾರ್ಟಿಸ್ ಅವರು ಪ್ರತಿಷ್ಠಿತ 2025ರ 'ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಶಾರ್ಜಾ ಕರ್ನಾಟಕ ಸಂಘದಿಂದ ಆಯ್ಕೆಯಾಗಿದ್ದಾರೆ.





ಶಾರ್ಜಾದ ವುಮೆನ್ಸ್ ಯೂನಿಯನ್ ಅಸೋಸಿಯೇಷನ್ ಹಾಲ್ನಲ್ಲಿ ನವೆಂಬರ್ 16 ರಂದು ಸಂಜೆ 3:30ಕ್ಕೆ ನಡೆಯಲಿರುವ ಶಾರ್ಜಾ ಕರ್ನಾಟಕ ಸಂಘದ 23ನೇ ವಾರ್ಷಿಕ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ರೊನಾಲ್ಡ್ ಮಾರ್ಟಿಸ್ ಅವರು ಸಮಾಜಕ್ಕೆ ನೀಡಿದ ಗಣನೀಯ ಕೊಡುಗೆಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇದಲ್ಲದೆ, ವಾಸು ಶೆಟ್ಟಿ ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿನ ಶ್ರೇಷ್ಠತೆಗಾಗಿ, ಅಬ್ದುಲ್ ಲತೀಫ್ ಮುಲ್ಕಿ ಅವರಿಗೆ ಸಾಮಾಜಿಕ ಸೇವೆಗಾಗಿ 'ಸಾಧಕ ಪ್ರಶಸ್ತಿ' ಮತ್ತು ಸಂಘದ ಪದಾಧಿಕಾರಿ ಸಯ್ಯದ್ ಅಜ್ಮಲ್ ಅವರಿಗೆ ಸಂಸ್ಥೆಗೆ ಸಲ್ಲಿಸಿದ ಸಮರ್ಪಣಾ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ, ಅನಿವಾಸಿ ಕನ್ನಡ ಮಕ್ಕಳಿಗಾಗಿ 'ಚಿಣ್ಣರ ಚಿಲಿಪಿಲಿ' ಎಂಬ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಮತ್ತು 'ಬಾನ ದಾರಿಯಲ್ಲಿ' ಎಂಬ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಶಿಕ್ಷಕಿ ವಂದನಾ ರೈ ಕಾರ್ಕಳ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರೊನಾಲ್ಡ್ ಮಾರ್ಟಿಸ್ ಬಗ್ಗೆ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಮೂಡ ಎಂಬ ಪುಟ್ಟ ಗ್ರಾಮದವರಾದ ರೊನಾಲ್ಡ್ ಮಾರ್ಟಿಸ್ ಅವರು ಪರಿಶ್ರಮ ಮತ್ತು ಕಠಿಣ ಕೆಲಸಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಸಜಿಪ ನಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಜಿಪ ಮೂಡಿನಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ನಂತರ, ಅವರು 1994 ರಲ್ಲಿ ಪುಣೆಯಲ್ಲಿರುವ ತಮ್ಮ ಸಹೋದರನ ವ್ಯವಹಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
1998 ರಲ್ಲಿ ಮಂಗಳೂರಿಗೆ ಮರಳಿ 'ಸೇಂಟ್ ಆಂಟನಿ ಟ್ರಾನ್ಸ್ಪೋರ್ಟ್' ಅನ್ನು ಪ್ರಾರಂಭಿಸಿದರು. ಈ ಉದ್ಯಮದಲ್ಲಿ ಯಶಸ್ಸು ಕಾಣದ ಕಾರಣ, ಅವರು 2004 ರಲ್ಲಿ ದುಬೈಗೆ ತೆರಳಿದರು. ಅಲ್ಲಿ ಆರಂಭದಲ್ಲಿ ಆರ್ಎಕೆ ಸೆರಾಮಿಕ್ಸ್ನಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಂಪನಿಯಾದ ಆರ್ಎಕೆ ಲ್ಯಾಟಿಕ್ರೆಟ್ಗೆ ಸೇರಿದರು. ವಿಶ್ವ ವಿಖ್ಯಾತ ಬುರ್ಜ್ ಅಲ್ ಖಲೀಫಾದ ನಿರ್ಮಾಣ ತಂಡದಲ್ಲಿ ಇವರು ಸಹ ಭಾಗಿಯಾಗಿದ್ದರು. ದೃಢ ಸಂಕಲ್ಪದಿಂದ ಪ್ರೇರಿತರಾಗಿ, ಅವರು 2009 ರಲ್ಲಿ ಕೇವಲ ನಾಲ್ಕು ಉದ್ಯೋಗಿಗಳೊಂದಿಗೆ 'ಬ್ಲೂ ರಾಯಲ್' ಸಂಸ್ಥೆಯನ್ನು ಸ್ಥಾಪಿಸಿದರು.
ನಿರಂತರ ಪ್ರಯತ್ನ ಮತ್ತು ನಾಯಕತ್ವದಿಂದ, ಅವರ ಈ ಉದ್ಯಮವು ಈಗ ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ 'ಬ್ಲೂ ರಾಯಲ್ ಗ್ರೂಪ್ ಆಫ್ ಕಂಪನೀಸ್' ಆಗಿ ಬೇಳೆದು ನಿಂತಿದೆ. ತಮ್ಮ ಉದ್ಯಮಶೀಲತೆಯ ಯಶಸ್ಸಿನ ಜೊತೆಗೆ, ರೊನಾಲ್ಡ್ ಮಾರ್ಟಿಸ್ ಅವರು ತುಳು ಮತ್ತು ಕನ್ನಡ ಚಲನಚಿತ್ರೋದ್ಯಮದಲ್ಲಿ ನಿರ್ಮಾಪಕರಾಗಿಯೂ ಛಾಪು ಮೂಡಿಸಿದ್ದಾರೆ. ಸಮಾಜ ಸೇವಕ ಮತ್ತು ಮಾನವತಾವಾದಿಯಾಗಿ, ಅವರು ಮೊಗರ್ನಾಡ್ನ ಹೋಲಿ ಮದರ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸುವುದು ಸೇರಿದಂತೆ ಹಲವಾರು ದತ್ತಿ ಕಾರ್ಯಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲದೇ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೂ ನೆರವು ನೀಡಿದ್ದಾರೆ.
ತಮ್ಮ 50ನೇ ಹುಟ್ಟುಹಬ್ಬದಂದು, ವೈಎಂ ಫ್ರೆಂಡ್ಸ್ ಸಹಯೋಗದೊಂದಿಗೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ನೀಡುವುದರ ಮೂಲಕ ಸಹಾನುಭೂತಿ ಮತ್ತು ಸಮುದಾಯ ಸೇವೆಯ ಆದರ್ಶವನ್ನು ಪ್ರದರ್ಶಿಸಿದ್ದಾರೆ.
ವ್ಯಾಪಾರ ಮತ್ತು ಸಮಾಜ ಕಲ್ಯಾಣಕ್ಕೆ ನೀಡಿದ ಕೊಡುಗೆಗಳಿಗಾಗಿ, ಅವರು 2024 ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿಯ (ದುಬೈ ಘಟಕ) ಸಾಧಕ ಸನ್ಮಾನ, ಕರ್ನಾಟಕ ಸಂಘ ದುಬೈನ ಮಾನ್ಯತೆಗಳು ಮತ್ತು ಸ್ವಗ್ರಾಮದಲ್ಲಿ ಯುವಕ ಮಂಡಲ (ರಿ) ಶ್ರೀ ಶಾರದಾ ಪೂಜಾ ಸಮಿತಿ, ಸುಭಾಷ್ ನಗರ, ಸಜಿಪ ಮೂಡಿನಿಂದ ಸನ್ಮಾನ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.
ರೊನಾಲ್ಡ್ ಮಾರ್ಟಿಸ್ ಅವರು ತಮ್ಮ ಪತ್ನಿ ಕಾನ್ಲಿ ಮಾರ್ಟಿಸ್ ಮತ್ತು ಮಕ್ಕಳಾದ ರೇಚಲ್ ಮತ್ತು ರಸೆಲ್ ಅವರೊಂದಿಗೆ ಯುಎಇಯಲ್ಲಿ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.