ಥಿಂಪು(ಭೂತಾನ್), ನ. 11 (DaijiworldNews/AA): ಸ್ಫೋಟದ ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ ಅಪರಾಧಿಗಳಿಗೆ ಖಂಡಿತಾ ಶಿಕ್ಷೆಯಾಗುತ್ತದೆ ಎಂದು ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಸಂಬಂಧಿಸಿದಂತೆ ಇಂದು ಭೂತಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

ಇಂದಿನಿಂದ ಎರಡು ದಿನಗಳ ಕಾಲ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ಮೋದಿ, "ನಮ್ಮ ತನಿಖಾ ಸಂಸ್ಥೆಗಳು ಪಿತೂರಿಯ ಬೇರುಗಳನ್ನು ಆಳವಾಗಿ ಅಗೆಯುತ್ತವೆ. ದೆಹಲಿ ಸ್ಫೋಟದಿಂದ ಬಾಧಿತರಾದವರ ಕುಟುಂಬಗಳೊಂದಿಗೆ ಇಡೀ ರಾಷ್ಟ್ರವು ನಿಂತಿದೆ. ದೆಹಲಿಯಲ್ಲಿ ನಡೆದ ಭಯಾನಕ ಘಟನೆ ಎಲ್ಲರನ್ನೂ ಆಘಾತಗೊಳಿಸಿದೆ" ಎಂದು ತಿಳಿಸಿದರು.
ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗುತ್ತದೆ. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ನಿನ್ನೆ ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಇದರ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ. ಹೊಣೆಗಾರರಾದ ಎಲ್ಲರಿಗೂ ಶಿಕ್ಷೆಯಾಗುವುದು ಖಚಿತ" ಎಂದು ಹೇಳಿದರು.