ವಾಷಿಂಗ್ಟನ್, ನ. 04 (DaijiworldNews/TA): ಔಷಧಿ ತಲುಪಬೇಕಾದ ಪಾರ್ಸೆಲ್ನಲ್ಲಿ ಮಾನವ ದೇಹದ ಅಂಗಾಂಗಗಳು ಬಂದಿರುವ ವಿಚಿತ್ರ ಘಟನೆ ಅಮೆರಿಕಾದ ಕೆಂಟಕಿಯಲ್ಲಿ ನಡೆದಿದೆ. ಹಾಪ್ಕಿನ್ಸ್ವಿಲ್ಲೆ ಪ್ರದೇಶದ ನಿವಾಸಿಯಾದ ಮಹಿಳೆ ತನ್ನ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದರು. ಕೆಲ ದಿನಗಳ ನಂತರ ಬಾಕ್ಸ್ ತಲುಪಿದ ಕೂಡಲೇ ಅದು ಔಷಧಿಗಳದ್ದೆಂದು ಭಾವಿಸಿ ತೆರೆಯಲಾರಂಭಿಸಿದರು. ಆದರೆ ಅದರೊಳಗೆ ಔಷಧಿಗಳ ಬದಲು ಐಸ್ನೊಂದಿಗೆ ಸಂರಕ್ಷಿಸಲ್ಪಟ್ಟ ಮನುಷ್ಯನ ತೋಳುಗಳು ಹಾಗೂ ಬೆರಳುಗಳು ಕಂಡುಬಂದವು.

ಅಕಸ್ಮಿಕವಾಗಿ ಇಂಥ ವಸ್ತುಗಳನ್ನು ಕಂಡ ಮಹಿಳೆ ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಕರೆಮಾಡಿದರು. ತನಿಖಾ ಅಧಿಕಾರಿಗಳ ಪ್ರಕಾರ, ಆ ದಿನ ಆ ಮಹಿಳೆಗೆ ಎರಡು ಪ್ಯಾಕೇಜ್ಗಳು ಬಂದಿದ್ದವು. ಅದರಲ್ಲಿ ಒಂದರಲ್ಲಿ ಕಸಿಗೆ ಬಳಸಬೇಕಾಗಿದ್ದ ಮಾನವ ದೇಹದ ಬಿಡಿಭಾಗಗಳು ಇರಬಹುದು ಎಂದು ಶಂಕಿಸಲಾಗಿದೆ. ಆದರೆ ಆ ಪ್ಯಾಕೇಜ್ ತಪ್ಪಾಗಿ ಈ ವಿಳಾಸಕ್ಕೆ ತಲುಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಶ್ಚಿಯನ್ ಕೌಂಟಿಯ ಕರೋನರ್ ಸ್ಕಾಟ್ ಡೇನಿಯಲ್ ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ವಶಪಡಿಸಿಕೊಂಡರು ಮತ್ತು ಬಳಿಕ ಅವುಗಳನ್ನು ಸ್ಥಳೀಯ ಶವಾಗಾರಕ್ಕೆ ಕಳುಹಿಸಲಾಯಿತು. ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಆ ದೇಹದ ಭಾಗಗಳು ನಾಲ್ಕು ವಿಭಿನ್ನ ದಾನಿಗಳಿಂದ ಸಂಗ್ರಹಿಸಲ್ಪಟ್ಟಿದ್ದು, ಅವು ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಉದ್ದೇಶಕ್ಕಾಗಿ ಕಳುಹಿಸಲಾಗಿದ್ದವು ಎಂಬುದು ತಿಳಿದುಬಂದಿದೆ.
ಸ್ಕಾಟ್ ಡೇನಿಯಲ್ ಅವರು ಈ ಘಟನೆಯನ್ನು ಶಾಂತವಾಗಿ ಹಾಗೂ ಎಚ್ಚರಿಕೆಯಿಂದ ನಿಭಾಯಿಸಿದ ಮಹಿಳೆಯನ್ನು ಶ್ಲಾಘಿಸಿ, “ಅವರು ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆ” ಎಂದು ಪ್ರಶಂಸಿಸಿದ್ದಾರೆ. ತಪ್ಪಾಗಿ ತಲುಪಿದ ಈ ಪ್ಯಾಕೇಜ್ನ ಮೂಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.