ಕಾಬೂಲ್, ನ. 03 (DaijiworldNews/AA): ಉತ್ತರ ಅಫ್ಘಾನಿಸ್ತಾನದ ಮಜಾರ್-ಇ-ಶರೀಫ್ ಪರ್ವತ ಪ್ರದೇಶದಲ್ಲಿ ಸೋಮವಾರ ಬೆಳಗ್ಗಿನ ಜಾವ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಅವಘಡದಲ್ಲಿ ಈವರೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 1540ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮಜಾರ್-ಇ-ಶರೀಫ್ ಪರ್ವತ ಪ್ರದೇಶದಲ್ಲಿ 23 ಕಿಲೋಮೀಟರ್ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದೆ. ಈ ಭೂಕಂಪವು ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾದ ಮಜಾರ್-ಇ-ಶರೀಫ್ ಸಮೀಪ ಸಂಭವಿಸಿದೆ.
ಈ ಭೂಕಂಪದ ಬೆನ್ನಲ್ಲೇ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಈ ತೀವ್ರತೆಯ ಭೂಕಂಪದಿಂದ ಸಾವು-ನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದರ ಪರಿಣಾಮ ವ್ಯಾಪಕವಾಗಿರಬಹುದು ಎಂದು ತಿಳಿಸಿದೆ.
ಇನ್ನು ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರ ಸಮೀಮ್ ಜೋಯಂಡಾ ತಿಳಿಸಿದ್ದಾರೆ. ಮಧ್ಯ ಸಂಭವಿಸಿದ ಈ ಕಂಪನದ ಅನುಭವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್, ಇರಾನ್ನ ಮಶಾದ್ ಮತ್ತು ಪಾಕಿಸ್ತಾನದ ಇಸ್ಲಾಮಾಬಾದ್ವರೆಗೂ ಆಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.