ವಾಷಿಂಗ್ಟನ್, ಅ. 31(DaijiworldNews/TA): ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 57ರಿಂದ ಶೇ. 47ಕ್ಕೆ ಇಳಿಸಲು ಅಮೆರಿಕಾ ನಿರ್ಧರಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಸೌತ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ನಡುವೆ ನಡೆದ ವ್ಯಾಪಾರ ಮಾತುಕತೆಯ ನಂತರ ಈ ತೀರ್ಮಾನ ಪ್ರಕಟವಾಗಿದೆ. ಟ್ರಂಪ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 10ರಷ್ಟು ಇಳಿಸುತ್ತಿದ್ದೇವೆ. ಇದು ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧಕ್ಕೆ ಹೊಸ ದಿಕ್ಕು ನೀಡಲಿದೆ” ಎಂದು ಹೇಳಿದರು. ಶಿ ಜಿನ್ಪಿಂಗ್ ಅವರನ್ನು “ಅದ್ಭುತ ನಾಯಕ” ಎಂದು ಹೊಗಳಿದ ಟ್ರಂಪ್, ವ್ಯಾಪಾರ ಮತ್ತು ಸಹಕಾರ ಕ್ಷೇತ್ರದಲ್ಲಿ ಹಲವು ಪ್ರಮುಖ ಒಪ್ಪಂದಗಳಿಗೆ ಬಂದಿದ್ದೇವೆ. ಶೀಘ್ರದಲ್ಲೇ ಇದರ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದರು.

ಫೆಂಟನೈಲ್ ಸಂಬಂಧಿತ ಸರಕುಗಳ ಆಮದು ಮೇಲಿನ ಅಮೆರಿಕಾದ ಟ್ಯಾರಿಫ್ ಅನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಒಟ್ಟಾರೆ ಚೀನಾದ ಮೇಲಿನ ಟ್ಯಾರಿಫ್ ದರ ಶೇ. 47ಕ್ಕೆ ಇಳಿಯಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದರ ಪ್ರತಿಯಾಗಿ, ಚೀನಾ ಅಮೆರಿಕದೊಂದಿಗೆ ವಿರಳ ಭೂ ಖನಿಜಗಳ ಪೂರೈಕೆಗಾಗಿ ಒಂದು ವರ್ಷದ ಅವಧಿಯ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ಸೋಯಾಬೀನ್ ಸೇರಿದಂತೆ ಅಮೆರಿಕದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಚೀನಾ ಒಪ್ಪಿದೆ. ಟ್ರಂಪ್ ಅವರು “ಅಕ್ರಮ ಫೆಂಟಾನೈಲ್ ವ್ಯಾಪಾರವನ್ನು ನಿಯಂತ್ರಿಸಲು ಚೀನಾ ಅಗತ್ಯ ಕ್ರಮ ಕೈಗೊಳ್ಳಲಿದೆ” ಎಂದೂ ಹೇಳಿದ್ದಾರೆ.
ಈ ಕುರಿತು ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕಾ ಸರ್ಕಾರವೂ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. ಏಪ್ರಿಲ್ನಲ್ಲಿ ಟ್ರಂಪ್ ಚೀನಾಗೆ ಭೇಟಿ ನೀಡಲಿದ್ದು, ನಂತರ ಶಿ ಜಿನ್ಪಿಂಗ್ ಅಮೆರಿಕ ಭೇಟಿ ನೀಡುವ ನಿರೀಕ್ಷೆಯಿದೆ. ಈ ವೇಳೆ ವ್ಯಾಪಾರ ಮಾತುಕತೆ ಮತ್ತಷ್ಟು ಮುಂದುವರಿಯಲಿದೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ.