ಗಾಜಾ, ಅ. 29 (DaijiworldNews/AA): ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್ ಭಾರೀ ಪ್ರಮಾಣದಲ್ಲಿ ನಡೆಸಿದ ದಾಳಿಗೆ ಗಾಜಾ ಪಟ್ಟಿಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.

ಇಸ್ರೇಲ್ ಉತ್ತರ ಗಾಜಾದ ಹಲವಾರು ಜಾಗಗಳನ್ನು ಗುರಿಯಾಗಿಸಿ ಇಸ್ರೇಲ್ ವಾಯು ದಾಳಿ ನಡೆಸಿದೆ. ಮಧ್ಯ ಗಾಜಾ ಪಟ್ಟಿಯಲ್ಲಿರುವ ಬುರೈಜ್ ನಿರಾಶ್ರಿತರ ಶಿಬಿರದಲ್ಲಿ ಮನೆ ಮೇಲೆ ದಾಳಿ ನಡೆಸಿದ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ನಗರ ಖಾನ್ ಯೂನಿಸ್ನಲ್ಲಿ, ಮತ್ತೊಂದು ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಉತ್ತರ ಗಾಜಾದ ವೈದ್ಯಕೀಯ ಸೌಲಭ್ಯದ ಬಳಿ ಕನಿಷ್ಠ ಮೂರು ಸ್ಫೋಟಗಳ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ಸೋಮವಾರ ಹಮಾಸ್ ಒತ್ತೆಯಾಳಿನ ಮೃತದೇಹ ಇರುವ ಶವಪೆಟ್ಟಿಗೆಯನ್ನು ಹಸ್ತಾಂತರಿಸಿತ್ತು. ಆದರೆ ಈ ಶವಪೆಟ್ಟಿಗೆಯಲ್ಲಿ ಈ ಹಿಂದೆ ಮರಳಿಸಿದ ಒತ್ತೆಯಾಳಿನ ಮೃತದೇಹದ ಹೆಚ್ಚಿನ ಭಾಗಗಳಿದ್ದವು ಎಂದು ಇಸ್ರೇಲ್ ತಿಳಿಸಿದೆ.
ಸೋಮವಾರ ಹಸ್ತಾಂತರಿಸಲಾದ ದೇಹದ ಭಾಗಗಳು ಓಫಿರ್ ಝರ್ಫಾಟಿ ಎಂಬವರಿಗೆ ಸೇರಿದೆ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆದರೆ ಅವರ ಮೃತ ದೇಹವನ್ನು 2023ರ ಕೊನೆಯಲ್ಲಿ ಇಸ್ರೇಲ್ ಪಡೆಗಳು ವಶಪಡಿಸಿದ್ದವು. ಈಗ ಕಳುಹಿಸಿದ ಮೃತದೇಹಗಳು ಗಾಜಾದಲ್ಲಿ ಮೃತಪಟ್ಟ 13 ಮೃತ ಒತ್ತೆಯಾಳುಗಳದ್ದಲ್ಲ ಎಂದು ಹೇಳಲಾಗುತ್ತಿದೆ.