ಲಂಡನ್, ಅ. 27 (DaijiworldNews/AA): ಬ್ರಿಟನ್ನಲ್ಲಿ ಭಾರತೀಯ ಮೂಲದ 20 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣವನ್ನ ಪೊಲೀಸರು ಜನಾಂಗೀಯ ಪ್ರೇರಿತ ಎಂದಿದ್ದಾರೆ.

ಬ್ರಿಟನ್ನ ವೆಸ್ಟ್ ಮಿಡ್ಲ್ಯಾಂಡ್ಸ್ನಲ್ಲಿ ಘಟನೆ ನಡೆದಿದೆ. ಆಕೆಯ ಜನಾಂಗೀನ ಗುರುತಿನ ಕಾರಣದಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಇದು ಯುವತಿ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಾಗಿದೆ. ಕೃತ್ಯ ಎಸಗಿದ ಆರೋಪಿಗಾಗಿ ಶೋಧ ನಡೆಸುತ್ತಿದ್ದೇವೆ. ತನಿಖೆಗೆ ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರೋನನ್ ಟೈರರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲಾಗಿದೆ. ಆರೋಪಿಯ ಫೋಟೋವನ್ನೂ ಬಿಡುಗಡೆ ಮಾಡಲಾಗಿದೆ. ಆರೋಪಿ ಹುಡುಕಾಟಕ್ಕೆ ತಮ್ಮೊಂದಿಗೆ ಸಹಕರಿಸುವಂತೆ ಸ್ಥಳೀಯ ನಿವಾಸಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಯುವತಿಯೊಬ್ಬರು ದೌರ್ಜನ್ಯಕ್ಕೆ ಒಳಗಾಗಿ ರಸ್ತೆ ಮಧ್ಯೆ ಅಳುತ್ತಾ ಕುಳಿತಿರುವ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಮಾಹಿತಿ ತಿಳಿದ ಪೊಲೀಸರು ವಾಲ್ಸಾಲ್ನ ಪಾರ್ಕ್ ಹಾಲ್ ಪ್ರದೇಶಕ್ಕೆ ಹೋದಾಗ ಸಂತ್ರಸ್ತೆಯನ್ನ ಗುರುತಿಸಿದ್ದಾರೆ.