ಇಸ್ಲಾಮಾಬಾದ್, ಅ. 17 (DaijiworldNews/AA): ಅಫ್ಘಾನ್ ಗಡಿ ಬಳಿಯ ಉತ್ತರ ವಜೀರಿಸ್ತಾನದ ಮಿರ್ ಅಲಿಯಲ್ಲಿರುವ ಭದ್ರತಾ ಪಡೆಗಳ ಶಿಬಿರದ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ೭ ಮಂದಿ ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.

ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಗೆ ಸಂಬಂಧಿಸಿದ ಆತ್ಮಹತ್ಯಾ ಕಾರ್ ಬಾಂಬರ್, ಮಿರ್ ಅಲಿಯಲ್ಲಿರುವ ಭದ್ರತಾ ಪಡೆಗಳ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಬೃಹತ್ ಸ್ಫೋಟವು ಹತ್ತಿರದ ಮನೆಗಳಿಗೆ ಹಾನಿಯನ್ನುಂಟು ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ದೋಹಾದಲ್ಲಿ ಶಾಂತಿ ಮಾತುಕತೆ ನಡೆಸಲು ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿದೆ. ಅದರ ಖಾಲಿದ್ ಬಿನ್ ವಲೀದ್ ಆತ್ಮಹತ್ಯಾ ಘಟಕ ಮತ್ತು ತೆಹ್ರೀಕ್ ತಾಲಿಬಾನ್ ಗುಲ್ಬಹಾದಾರ್ ಈ ದಾಳಿಗಳನ್ನು ನಡೆಸಿವೆ ಎಂದು ತಿಳಿಸಿದೆ.
ಒಂದು ವಾರದ ತೀವ್ರ ಗಡಿ ಹೋರಾಟದ ನಂತರ ಡುರಾಂಡ್ ರೇಖೆಯಲ್ಲಿ ನಡೆದ ಕದನ ವಿರಾಮದ ಸಮಯದಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಎರಡೂ ಕಡೆಗಳಲ್ಲಿ ಹತ್ತಾರು ಜನರು ಸಾವನ್ನಪ್ಪಿದರು. ಅಫ್ಘಾನ್ ತಾಲಿಬಾನ್ ಕೋರಿಕೆಯ ಮೇರೆಗೆ ಕದನ ವಿರಾಮವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಮಾಹಿತಿ ನೀಡಿದೆ.