ವಾಷಿಂಗ್ಟನ್, ಅ. 15 (DaijiworldNews/AA): ಭಾರತ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್(64) ಅವರನ್ನು ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅಮೆರಿಕದಲ್ಲಿ ಬಂಧಿಸಲಾಗಿದೆ.

ಟೆಲ್ಲಿಸ್ ಅವರು ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ಗುಪ್ತವಾಗಿ ಇರಿಸಿಕೊಂಡಿದ್ದರು ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ತನಿಖೆಯಲ್ಲಿ ಕಂಡುಕೊಂಡಿದೆ. ಶನಿವಾರದಂದು ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಸೋಮವಾರದಂದು ಅಮೆರಿಕ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಯಾವುದೇ ಕಾರಣಕ್ಕೂ ರಕ್ಷಣಾ ಸಂಬಂಧಿತ ದಾಖಲೆಗಳನ್ನು ತಮ್ಮಲ್ಲಿ ಅನಧಿಕೃತವಾಗಿ ಹೊಂದಿರುವುದು ಅಥವಾ ಉಳಿಸಿಕೊಳ್ಳುವುದನ್ನು ಅಮೆರಿಕದ ಕಾನೂನು ಒಪ್ಪಿಕೊಳ್ಳುವುದಿಲ್ಲ. ಟೆಲ್ಲಿಸ್ ಅವರು ಈ ಎಲ್ಲ ದಾಖಲೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದೀಗ 1,000 ಪುಟಗಳಿಗೂ ಹೆಚ್ಚು ವರ್ಗೀಕೃತ ದಾಖಲೆಗಳು ಸೇರಿದಂತೆ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಅಕ್ರಮವಾಗಿ ಹೊಂದಿರುವ ಹಿನ್ನೆಲೆ ಅವರನ್ನು ಬಂಧಿಸುವಂತೆ ಅಮೆರಿಕದ ಕೋರ್ಟ್ ಆದೇಶ ಹೊರಡಿಸಿದೆ. ಟೆಲ್ಲಿಸ್ ಅವರನ್ನು ಅಮೆರಿಕ-ಭಾರತದ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಯೋಜನೆ ಮಾಡಲಾಗಿತ್ತು. ಇದರೊಂದಿಗೆ ಟೆಲ್ಲಿಸ್ ಅವರು ಅನೇಕ ಆಡಳಿತ್ಮಕ ವಿಚಾರದಲ್ಲಿ ಸೇವೆಗಳನ್ನು ಸಲ್ಲಿಸಿದ್ದಾರೆ.
ಟೆಲ್ಲಿಸ್ ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನು ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದರು. ಇದಕ್ಕೆ ಸಾಕ್ಷಿಯಾಗಿ ಅವರು ಈ ಕಟ್ಟಡದಿಂದ ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿಯ ದೃಶ್ಯಗಳ ಆಧಾರದ ಮೇರೆಗೆ ಅಧಿಕಾರಿಗಳು ಶನಿವಾರದಂದು ಟೆಲ್ಲಿಸ್ ನಿವಾಸದ ಮೇಲೆ ದಾಳಿ ನಡೆಸಿ, ಶೋಧಕಾರ್ಯ ನಡೆಸಿದ್ದರು, ಈ ವೇಳೆ ಅನೇಕ ದಾಖಲೆಗಳು ಅಧಿಕಾರಿಗಳಿಗೆ ದೊರೆತಿವೆ.
ಇನ್ನು ಅಧಿಕಾರಿಗಳು ಅಮೆರಿಕ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೆಲವು ವರ್ಷಗಳಿಂದ ಹಲವಾರು ಬಾರಿ ಚೀನಾ ಸರ್ಕಾರದ ಅಧಿಕಾರಿಗಳನ್ನು ಟೆಲ್ಲಿಸ್ ಭೇಟಿಯಾಗಿದ್ದಾರೆ. 2023ರ ಏಪ್ರಿಲ್ನಲ್ಲಿ, ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಔತಣಕೂಟವೊಂದರಲ್ಲಿ ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಈ ವೇಳೆ ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.