ವಾಷಿಂಗ್ಟನ್, ಅ. 14(DaijiworldNews/TA): ಇಸ್ರೇಲ್-ಹಮಾಸ್ ನಡುವಿನ ಕದನವಿರಾಮ ಮತ್ತು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಸಂಬಂಧ ನಡೆದ ಬೆಳವಣಿಗೆಯ ನಂತರ, ಪ್ರಧಾನಿ ನರೇಂದ್ರ ಮೋದಿಯು ಹಮಾಸ್ ಒಪ್ಪಂದವನ್ನು ಸ್ವಾಗತಿಸಿದ್ದು, ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರನ್ನು ಭಾರೀ ಮಟ್ಟದಲ್ಲಿ ಹೊಗಳಿದ್ದಾರೆ.

ಈಜಿಪ್ಟ್ನಲ್ಲಿ ನಡೆದ ವಿಶ್ವ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, “ಭಾರತ ಒಂದು ಅದ್ಭುತ ರಾಷ್ಟ್ರ. ಅದನ್ನು ಮುನ್ನಡೆಸುತ್ತಿರುವ ವ್ಯಕ್ತಿ ನನ್ನ ಆತ್ಮೀಯ ಸ್ನೇಹಿತ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದರು. ವಿಶೇಷವೆಂದರೆ, ಈ ಮಾತುಗಳನ್ನಾಡುವಾಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರಿಬ್ಬರ ಹಿಂದೆಯೇ ನಿಂತಿದ್ದರು.
ಟ್ರಂಪ್ ಪಾಕಿಸ್ತಾನಕ್ಕೆ ಸಂದೇಶ ನೀಡುವ ಶೈಲಿ ಚರ್ಚೆಗೆ ಗ್ರಾಸವಾಗಿದ್ದು, ಅವರು ಶರೀಫ್ ಕಡೆ ತಿರುಗಿ ನೋಡಿ, “ಹೌದಲ್ಲವೇ?” ಎಂದು ನಗುತ್ತಾ ಕೇಳಿದಾಗ, ಶೆಹಬಾಜ್ ಶರೀಫ್ ಕೂಡ ಸಮಾಧಾನಕರ ನಗೆಯೊಂದಿಗೆ ತಲೆಯಾಡಿಸಿ ಪ್ರತಿಕ್ರಿಯಿಸಿದರು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಶೆಹಬಾಜ್ ಶರೀಫ್ ಅವರನ್ನು ಶ್ಲಾಘಿಸಿ, ಶೃಂಗಸಭೆಯಲ್ಲಿ ಭಾಷಣ ಮಾಡಲು ಆಹ್ವಾನಿಸಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಈ ಯುದ್ಧಾವಕಾಶದ ಬಳಿಕ ಬರೋಬ್ಬರಿ 2 ವರ್ಷಗಳ ನಂತರ 20 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಈ ಕದನವಿರಾಮ ಸಾಧ್ಯವಾಗಿದೆ. ಈ ಮಾತುಕತೆ ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು.
ಈ ಮಹತ್ವದ ಬೆಳವಣಿಗೆಯನ್ನು ಭಾರತದ ಪ್ರಧಾನಿ ಮೋದಿ ಸ್ವಾಗತಿಸಿ, ಟ್ರಂಪ್ ಶಾಂತಿ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಪ್ರತಿಕ್ರಿಯೆಯಾಗಿ, ಟ್ರಂಪ್ ಅವರು ಕೂಡ ಮೋದಿ ಪರ ಮೆಚ್ಚುಗೆಯ ಮಾತುಗಳನ್ನಾಡಿರುವುದು, ಭಾರತ–ಅಮೆರಿಕ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆಯೇ ಎಂಬ ಕುತೂಹಲ ಮೂಡಿಸಿದೆ.