ಕಾಬೂಲ್, ಅ. 12 (DaijiworldNews/AA): ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ 58 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಅಫ್ಘಾನಿಸ್ತಾನ ತಿಳಿಸಿದೆ.

ಇಸ್ಲಾಮಿಕ್ ಎಮಿರೇಟ್ ಪಡೆಗಳು ವಿವಾದಿತ ಡುರಾಂಡ್ ಗಡಿ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಕಾರ್ಯಾಚರಣೆ ನಡೆಸಿವೆ. ಇದರಿಂದಾಗಿ ಗಮನಾರ್ಹ ಸಾವುನೋವುಗಳು ಸಂಭವಿಸಿವೆ ಎಂದು ಅಫ್ಘಾನಿಸ್ತಾನ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ 58 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದು, ಜೊತೆಗೆ 30 ಜನರು ಗಾಯಗೊಂಡಿದ್ದಾರೆ. ಹಲವಾರು ಶಸ್ತ್ರಾಸ್ತ್ರಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಲಾಗಿದೆ. 20 ಪಾಕಿಸ್ತಾನಿ ಭದ್ರತಾ ಠಾಣೆಗಳನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದರು.
ಅಫ್ಘಾನ್ ಕಡೆಯಿಂದ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಕತಾರ್ ಮತ್ತು ಸೌದಿ ಅರೇಬಿಯಾದ ಮನವಿಯ ಮೇರೆಗೆ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯವು ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಐಸಿಸ್-ಕೆಗಾಗಿ ತರಬೇತಿ ಕೇಂದ್ರಗಳನ್ನು ಹೊಂದಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಇರಾನ್ ಮತ್ತು ಮಾಸ್ಕೋದಲ್ಲಿ ದಾಳಿಗಳನ್ನು ಈ ಕೇಂದ್ರಗಳಿಂದಲೇ ನಡೆದಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಾಳಿಗಳನ್ನು ಸಹ ಈ ನೆಲೆಗಳಿಂದಲೇ ಯೋಜಿಸಲಾಗಿತ್ತು. ಪ್ರಮುಖ ಐಸಿಸ್-ಕೆ ಸದಸ್ಯರನ್ನು ನಮಗೆ ಹಸ್ತಾಂತರಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.