ವಾಷಿಂಗ್ಟನ್, ,ಅ. 12(DaijiworldNews/TA): ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿರುವ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರು, ಪ್ರಶಸ್ತಿಯನ್ನು ಸ್ವೀಕರಿಸಿದ ಕೂಡಲೇ ಅದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಅರ್ಪಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ಧಾರೆ.

ವಿರೋಧ ಪಕ್ಷದ ನಾಯಕಿ ಮಾರಿಯಾ, ತನ್ನ ದೇಶದ ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ಅಮೆರಿಕ ಮತ್ತು ಟ್ರಂಪ್ ನೀಡಿದ ಬೆಂಬಲಕ್ಕಾಗಿ ಪ್ರಶಸ್ತಿಯನ್ನು ಸಮರ್ಪಣೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ತಮ್ಮ ಭಾವನಾತ್ಮಕ ಸಂದೇಶದಲ್ಲಿ, ಅವರು ಟ್ರಂಪ್ರನ್ನು "ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಪುನಃಸ್ಥಾಪನೆಗೆ ಸಹಾಯ ಮಾಡಿದ ಪ್ರಮುಖ ಮಿತ್ರ" ಎಂದು ಶ್ಲಾಘಿಸಿದ್ದಾರೆ.
"ಈ ಪ್ರಶಸ್ತಿಯನ್ನು ನಾನು ವೆನೆಜುವೆಲಾದ ಜನರಿಗೆ ಮತ್ತು ನಮ್ಮ ಹೋರಾಟದಲ್ಲಿ ಬೆಂಬಲ ನೀಡಿದ ಅಧ್ಯಕ್ಷ ಟ್ರಂಪ್ಗೆ ಅರ್ಪಿಸುತ್ತೇನೆ. ನಾವು ಸ್ವಾತಂತ್ರ್ಯದ ಗುರಿಯ ಅಂಚಿನಲ್ಲಿದ್ದೇವೆ. ಟ್ರಂಪ್, ಅಮೆರಿಕದ ಜನರು, ಲ್ಯಾಟಿನ್ ಅಮೆರಿಕದ ಹೋರಾಟಗಾರರು ಹಾಗೂ ಪ್ರಜಾಪ್ರಭುತ್ವ ನಂಬಿರುವ ಎಲ್ಲಾ ರಾಷ್ಟ್ರಗಳಿಗೆ ಇದು ಹೊಸ ಉತ್ಸಾಹ ನೀಡುತ್ತದೆ," ಎಂದು ಮಾರಿಯಾ ಹೇಳಿದ್ದಾರೆ.
ಈ ಘೋಷಣೆಯ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್, ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ವಲಯದಲ್ಲಿ ಸಂವೇದನೆ ಮೂಡಿಸಿದೆ. ಹಿಂದೆ ಹಲವು ಬಾರಿ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಶಿಫಾರಸು ಆಗಿದ್ದರೂ, ಪ್ರತಿಜ್ಞಾಪೂರಿತ ಹಂತದಲ್ಲಿ ಅವರು ಗೌರವಕ್ಕೆ ಪಾತ್ರರಾಗಿಲ್ಲ.
ನೊಬೆಲ್ ಸಂಸ್ಥೆಯ ನಿರ್ದೇಶಕ ಕ್ರಿಶ್ಚಿಯನ್ ಬರ್ಗ್, ಪ್ರಶಸ್ತಿ ಘೋಷಣೆಗೆ ಮುನ್ನ ಮಾರಿಯಾ ಕೊರಿನಾಗೆ ವೈಯಕ್ತಿಕವಾಗಿ ಕರೆ ಮಾಡಿ ಅವರು ಈ ಬಾರಿಯ ವಿಜೇತೆಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಈ ಕ್ಷಣದ ವೀಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾರಿಯಾ ಈ ಘೋಷಣೆಯನ್ನು ನಂಬಲು ಸಾಧ್ಯವಾಗಿಲ್ಲವೆಂದು ಹೇಳಿದ್ದು, ತಮ್ಮ ಜನರ ಪರವಾಗಿ ಈ ಗೌರವ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ.