ಇಸ್ಲಮಾಬಾದ್,ಅ. 11 (DaijiworldNews/AK): ಉಗ್ರರು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪೊಲೀಸ್ ತರಬೇತಿ ಕೇಂದ್ರದ ಗೇಟ್ಗೆ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆಸಿ ಸ್ಫೋಟಿಸಿದ್ದಾರೆ. ಶುಕ್ರವಾರ ತಡರಾತ್ರಿ ಈ ದಾಳಿ ನಡೆದಿದ್ದು, ಇದಾದ ಬಳಿಕ ಐದು ಗಂಟೆಗಳ ಕಾಲ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ದಾಳಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ 6 ಭಯೋತ್ಪಾದಕರು ಹಾಗೂ 7 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಈ ದಾಳಿಯಲ್ಲಿ 13 ಮಂದಿ ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ಸಮಯದಲ್ಲಿ ಸುಮಾರು 200 ತರಬೇತಿ ನಿರತ ಪೊಲೀಸರು, ಬೋಧಕರು ಮತ್ತು ಸಿಬ್ಬಂದಿ ತರಬೇತಿ ಕೇಂದ್ರದಲ್ಲಿದ್ದರು. ಎಲ್ಲಾ ತರಬೇತಿ ನಿರತ ಅಭ್ಯರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಾಕ್ ಸೇನಾ ಸಿಬ್ಬಂದಿ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭದ್ರತಾ ಸಿಬ್ಬಂದಿ ಉಗ್ರರ ಬಳಿ ಇದ್ದ ಆತ್ಮಹತ್ಯಾ ಜಾಕೆಟ್ಗಳು, ಸ್ಫೋಟಕಗಳು, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಡಗಿರುವ ಉಗ್ರರಿಗಾಗಿ ಭದ್ರತಾ ಸಿಬ್ಬಂದಿ ಹೆಚ್ಚಿನ ಶೋಧ ನಡೆಸುತ್ತಿದ್ದಾರೆ.
ಯಶಸ್ವಿ ಕಾರ್ಯಾಚರಣೆಗಾಗಿ ಐಜಿಪಿ ಆರ್ಪಿಒ ಮತ್ತು ಡಿಪಿಒ ನಾಯಕತ್ವವನ್ನು ಶ್ಲಾಘಿಸಿದರು, ಹುತಾತ್ಮರಿಗೆ ಗೌರವ ಸಲ್ಲಿಸಿದರು ಮತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಹುಮಾನಗಳನ್ನು ಘೋಷಿಸಿದರು.