ವಾಷಿಂಗ್ಟನ್, ಅ. 10 (DaijiworldNews/TA): ನಾರ್ವೆಯ ನೊಬೆಲ್ ಸಮಿತಿಯು 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ವೆನೆಜುವೆಲಾದ ಧೈರ್ಯವಂತ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರನ್ನು ಆಯ್ಕೆ ಮಾಡಿದೆ. ವೆನೆಜುವೆಲಾದ ಜನರ ಹಕ್ಕುಗಳಿಗಾಗಿ ಮತ್ತು ಸರ್ವಾಧಿಕಾರಶಾಹಿಯ ವಿರುದ್ಧ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನಡೆಸಿದ ಅವರ ನಿರ್ಭೀತ ಹೋರಾಟ ಈ ಪ್ರಶಸ್ತಿಗೆ ಕಾರಣವಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಈ ವರ್ಷದ ಪ್ರಶಸ್ತಿಗೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಯಾಗುತ್ತಿದ್ದ ಹೆಸರುಗಳಲ್ಲಿ ಒಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದರು. ತಮ್ಮ 20 ಅಂಶಗಳ ಗಾಜಾ ಶಾಂತಿ ಯೋಜನೆ, 8 ಯುದ್ಧಗಳ ಅಂತ್ಯ, ಜಾಗತಿಕ ಶಾಂತಿಗೆ ತಮ್ಮ ಕೊಡುಗೆ ಇತ್ಯಾದಿಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದ ಟ್ರಂಪ್ ಅವರಿಗೆ ಈ ಬಾರಿ ಪ್ರಶಸ್ತಿ ಕೈ ತಪ್ಪಿರುವುದು ವ್ಯಾಪಕ ಗಮನ ಸೆಳೆದಿದೆ. ಈ ಕುರಿತು ಪ್ರಶ್ನೆ ಕೇಳಿದಾಗ ನೊಬೆಲ್ ಶಾಂತಿ ಸಮಿತಿಯ ಅಧ್ಯಕ್ಷರು ಸ್ಪಷ್ಟವಾಗಿ ಮಾತನಾಡಿದ್ದಾರೆ.
ಅವರು ಹೇಳಿದ ಪ್ರಕಾರವಾಗಿ : “ಈ ಪ್ರಶಸ್ತಿ ಯಾರಿಗೂ ಪ್ರಚಾರದ ಆಧಾರದ ಮೇಲೆ ನೀಡಲಾಗುವುದಿಲ್ಲ. ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ, ಧೈರ್ಯ, ಶಿಸ್ತು, ಮತ್ತು ಶಾಂತಿಯು ಒಡನಾಡಿಯಾದವರೇ ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ. ಪ್ರಶಸ್ತಿಗೆ ಅರ್ಜಿಗಳ ಸಂಖ್ಯೆ, ಮಾಧ್ಯಮ ಒತ್ತಡ ಅಥವಾ ರಾಜಕೀಯ ಭರವಸೆಗಳು ಯಾವುದೇ ಪರಿಣಾಮ ಬೀರುವುದಿಲ್ಲ.”
ಅವರ ಪ್ರಕಾರ, ಮಚಾಡೊ ಅವರಿಗೆ ಸಾವಿನ ಬೆದರಿಕೆಯ ನಡುವೆಯೂ ಸ್ವದೇಶದಲ್ಲಿ ಉಳಿದು ಶಾಂತಿಪೂರ್ಣ ಹೋರಾಟ ನಡೆಸಿದ ಧೈರ್ಯದ ಕಾರಣ ಪ್ರಶಸ್ತಿ ನೀಡಲಾಗಿದೆ. ಅವರ ಹೋರಾಟ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.
ಟ್ರಂಪ್ ಪ್ರಶಸ್ತಿ ಗಿಟ್ಟಿಸಿಕೊಳ್ಳದಿರುವ ನಾಲ್ಕು ಪ್ರಮುಖ ಕಾರಣಗಳು:
1. ಅರ್ಜಿಗಳ ಅವಧಿ ಮುಗಿದ ನಂತರ ಪ್ರಚಾರ: ನಾಮನಿರ್ದೇಶನಗಳು ಜನವರಿಯಲ್ಲೇ ಮುಕ್ತಾಯವಾಗಿದ್ದವು. ಟ್ರಂಪ್ ನಂತರದ ತಿಂಗಳಲ್ಲಿ ಪ್ರಚಾರವನ್ನು ತೀವ್ರಗೊಳಿಸಿದ್ದರು. ಅರ್ಜಿ ಸಲ್ಲಿಕೆಗೆ ತಡವಾದ ಕಾರಣ ಅವರು ಪರಿಗಣನೆಯಲ್ಲಿರಲಿಲ್ಲ.
2. ಕರ್ಮವರ್ಷ – 2024: 2025ರ ಪ್ರಶಸ್ತಿಗೆ ಪರಿಗಣಿಸಲಾದ ಕೆಲಸಕಾರ್ಯ 2024ರ ಅವಧಿಗೆ ಸಂಬಂಧಪಟ್ಟವು. ಆ ಸಮಯದಲ್ಲಿ ಟ್ರಂಪ್ ಇನ್ನೂ ಅಧಿಕಾರ ವಹಿಸಿಕೊಳ್ಳದೆ, ಆಯ್ಕೆಯಲ್ಲಿದ್ದವರು ಮಾತ್ರ.
3. ನಾಮನಿರ್ದೇಶನೆ ಅಂದರೆ ಖಾತರಿಯಲ್ಲ: ಟ್ರಂಪ್ರನ್ನು ಪಾಕಿಸ್ತಾನ, ಇಸ್ರೇಲ್, ಥೈಲ್ಯಾಂಡ್, ಕಾಂಬೋಡಿಯಾ ಸೇರಿ ಹಲವಾರು ರಾಷ್ಟ್ರಗಳು ನಾಮನಿರ್ದೇಶನ ಮಾಡಿದ್ದರೂ, ನಾಮನಿರ್ದೇಶನ ಮಾಡುವುದು ಪ್ರಶಸ್ತಿ ಪಡೆಯುವ ಭರವಸೆಯಲ್ಲ. ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಂಪೂರ್ಣವಾಗಿ ಸಮಿತಿಯ ಅಂತರ್ಗತ ವಿಶ್ಲೇಷಣೆಯ ಆಧಾರದ ಮೇಲೆ ನಡೆಯುತ್ತದೆ.
4. ಸಮಿತಿಯ ಸ್ಪಷ್ಟ ದೃಷ್ಠಿಕೋಣ: “ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ಹಿಮ್ಮೆಟ್ಟುತ್ತಿರುವ ಸಂದರ್ಭದಲ್ಲಿ, ಶಾಂತಿಯುತವಾಗಿ ಹೋರಾಡುವವರನ್ನು ಗುರುತಿಸುವುದು ಅತ್ಯವಶ್ಯಕ” ಎಂಬ ನಿಲುವು ಹೊಂದಿರುವ ನೊಬೆಲ್ ಸಮಿತಿ, ತಮ್ಮ ಶ್ರದ್ಧಾ ಮತ್ತು ದೃಷ್ಟಿಕೋನಕ್ಕೆ ತಕ್ಕವರನ್ನೇ ಆಯ್ಕೆ ಮಾಡಿದೆ. ಈ ಪ್ಯಾರಮೀಟರ್ಗಳಿಗೆ ಟ್ರಂಪ್ರ ಶೈಲಿ ಹೊಂದಿಕೆಯಾಗಲಿಲ್ಲ.
ಮಚಾಡೊ – ಶಾಂತಿಯ ಧ್ವಜಧಾರಿಣಿ : ಮರಿಯಾ ಮಚಾಡೊ ಅವರು ವೆನೆಜುವೆಲಾದ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಸರಕಾರದ ವಿರೋಧದಲ್ಲಿದ್ದರೂ, ಯಾವುದೇ ಹಿಂಸಾತ್ಮಕ ಮಾರ್ಗವನ್ನೂ ಹಿಡಿಯದೆ ನಿರಂತರವಾಗಿ ಧೈರ್ಯದಿಂದ ಹೋರಾಟ ನಡೆಸಿದ್ದಾರೆ. ಈ ಹೋರಾಟದ ನಡುವೆ ಅವರಿಗೆ ಬಹುಮಾನವಾಗಿ ದೊರಕಿದ ನೊಬೆಲ್ ಪ್ರಶಸ್ತಿ, ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ಮತ್ತು ಶಾಂತಿಯ ಪರ ಹೋರಾಟಗಾರರಿಗೆ ಸ್ಫೂರ್ತಿ ಮೂಡಿಸುತ್ತಿದೆ.