ಇಸ್ಲಮಾಬಾದ್, ಅ. 08 (DaijiworldNews/AA): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ 19 ಭಯೋತ್ಪಾದಕರು ಮತ್ತು 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರಗಳು ಹೆಚ್ಚಳವಾಗಿದೆ. ಇದರಲ್ಲಿ ಹೆಚ್ಚಿನವು ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಟಿಟಿಪಿಯಿಂದ ನಡೆಯುತ್ತಿವೆ. ಇದು ಅಫ್ಘಾನ್ ತಾಲಿಬಾನ್ಗಿಂತ ಭಿನ್ನವಾಗಿದ್ದು, ಅದರೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಅಕ್ಟೋಬರ್ 7ರ ರಾತ್ರಿ 'ಫಿಟ್ನಾ ಅಲ್-ಖವಾರಿಜ್' ಎಂದು ಕರೆಯಲ್ಪಡುವ ಗುಂಪಿನ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ಪಾಕ್ ಸೇನೆಯು ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ಸಂದರ್ಭ ಮೃತಪಟ್ಟ ಪಾಕ್ ಸೈನಿಕರಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಕೂಡ ಸೇರಿದ್ದಾರೆ. ಇದೇ ವೇಳೆ 19 ಭಯೋತ್ಪಾದಕರು ಸಹ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ಮಾಹಿತಿ ನೀಡಿದೆ.