ವಾಷಿಂಗ್ಟನ್, ಅ. 06 (DaijiworldNews/AA): ಅಮೆರಿಕದ ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ಭಾರತ ಮೂಲದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ರಾಕೇಶ್(51) ಎಂದು ಗುರುತಿಸಲಾಗಿದೆ. ಮೃತರು ರಾಬಿನ್ಸನ್ ಟೌನ್ಶಿಪ್ನಲ್ಲಿ ಪಿಟ್ಸ್ಬರ್ಗ್ ಮೋಟೆಲ್ ನಡೆಸುತ್ತಿದ್ದರು. ಯುಜೀನ್ ವೆಸ್ಟ್(37) ಎಂಬಾತ ರಾಕೇಶ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.
ಮೋಟೆಲ್ನ ಪಾರ್ಕಿಂಗ್ ಸ್ಥಳದಲ್ಲಿ ಯುಜೀನ್ ಹಾಗೂ ಓರ್ವ ಮಹಿಳೆ ನಡುವೆ ವಾಗ್ವಾದ ನಡೆದಿತ್ತು. ಆ ಸಂದರ್ಭದಲ್ಲಿ ಯುಜೀನ್ ಮಹಿಳೆಗೆ ಗುಂಡು ಹಾರಿಸಿದ್ದ. ಇದನ್ನು ಕೇಳಿ ಓಡಿ ಬಂದ ರಾಕೇಶ್ ಮಹಿಳೆ ಬಳಿ ಓಡಿ ಹೋಗಿ ನೀವು ಸುರಕ್ಷಿತವಾಗಿದ್ದೀರಲ್ಲವೇ ಎಂದು ವಿಚಾರಿಸಿದ್ದರು. ಇದೇ ವೇಳೆ ಯುಜೀನ್ ರಾಕೇಶ್ ತಲೆಗೆ ಗುಂಡು ಹಾರಿಸಿದ್ದಾನೆ.
ಶಂಕಿತ ವ್ಯಕ್ತಿ ಪಿಟ್ಸ್ಬರ್ಗ್ನ ಮೋಟೆಲ್ನಲ್ಲಿ ಮಹಿಳೆ ಮತ್ತು ಮಗುವಿನೊಂದಿಗೆ ಸುಮಾರು ಎರಡು ವಾರಗಳಿಂದ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮಹಿಳೆ ಕೆರ್ನಿಕ್ ಟೈರ್ ಮತ್ತು ಆಟೋ ಸೇವಾ ಕೇಂದ್ರವನ್ನು ತಲುಪಿಸಲಾಯಿತು. ಬಳಿಕ ಅಲ್ಲಿ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯೊಂದಿಗೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಗುವಿಗೆ ಯಾವುದೇ ಗಾಯಗಳಾಗಿಲ್ಲ.
ಗುಂಡಿನ ದಾಳಿಯ ಸಮಯದಲ್ಲಿ ರಾಕೇಶ್ ಎಹಾಗ್ಬನ್ ಮೋಟೆಲ್ ಹೊರಗೆ ಬಂದಿದ್ದರು. ಗುಂಡಿನ ದಾಳಿಯಿಂದ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯುಜೀನ್ ವೆಸ್ಟ್ ಹತ್ತಿರದಲ್ಲಿ ನಿಲ್ಲಿಸಿದ್ದ ಯು-ಹಾಲ್ ವ್ಯಾನ್ ಕಡೆಗೆ ನಡೆದು ಪರಾರಿಯಾಗಿದ್ದಾನೆ. ಆತನ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.
ಗುಂಡಿನ ದಾಳಿಯ ಬಳಿಕ ಆರೋಪಿ ಯುಜೀನ್ ವೆಸ್ಟ್ ಗಾಗಿ ಪೊಲೀಸರು ಹುಡುಕಾಟ ನಡೆಸಿದರು. ನಂತರ ಆತನನ್ನು ಪಿಟ್ಸ್ಬರ್ಗ್ನ ಈಸ್ಟ್ ಹಿಲ್ಸ್ ಪ್ರದೇಶದಲ್ಲಿ ಪತ್ತೆ ಮಾಡಿದರು. ಪೊಲೀಸರು ಆತನನ್ನು ಬಂಧಿಸಲು ಬಂದಾಗ, ಆತ ಅಧಿಕಾರಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾನೆ ಎನ್ನಲಾಗಿದೆ.