ಇಸ್ಲಾಮಾಬಾದ್, ಅ. 05 (DaijiworldNews/TA): ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ತೋರಿದ ನಖ್ವಿ ಅವರ ನಿಲುವಿಗೆ ವ್ಯಾಪಕ ಟೀಕೆಗಳ ನಡುವೆಯೂ, ಪಾಕಿಸ್ತಾನ ಸರ್ಕಾರ ಮೋಹ್ಸಿನ್ ನಖ್ವಿ ಅವರನ್ನು ಗೌರವಿಸಲು ಮುಂದಾಗಿದೆ.

ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದ್ದು, ಅಲ್ಲಿಗೆ ಅವರು ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕವನ್ನು ಪಡೆಯಲಿದ್ದಾರೆ. ಈ ಸಮಾರಂಭದಲ್ಲಿ ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ, ಆದರೆ ಕಾರ್ಯಕ್ರಮದ ದಿನಾಂಕ ಇನ್ನೂ ನಿಗಧಿಗೊಳಿಸಲಾಗಿಲ್ಲ.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತ್ತು. ಇದಾದ ಬಳಿಕ ನಖ್ವಿ ಟ್ರೋಫಿ ಮತ್ತು ಪದಕಗಳನ್ನು ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಟೀಕೆಗಳ ಗುರಿಯಾಗಿದೆ. ನಂತರ ಈ ಟ್ರೋಫಿ ಮತ್ತು ಪದಕಗಳನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲಾಯಿತು, ಆದರೆ ಅವು ಯಾವಾಗ ಮತ್ತು ಹೇಗೆ ಭಾರತಕ್ಕೆ ತಲುಪಲಿವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.