ಅಮೆರಿಕಾ, ಅ. 04 (DaijiworldNews/TA): ಅಮೆರಿಕಾದ ಡಲ್ಲಾಸ್ನಲ್ಲಿ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್ ಮೂಲದ ಚಂದ್ರಶೇಖರ್ ಪೋಲ್ ನಿನ್ನೆ ರಾತ್ರಿ ಪೆಟ್ರೋಲ್ ಬಂಕ್ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾಗ ಅಪರಿಚಿತ ಬಂದೂಕುಧಾರಿಯೊಬ್ಬ ಆತನನ್ನು ಹತ್ಯೆ ಮಾಡಿದ್ದಾನೆ.

ಚಂದ್ರಶೇಖರ್ ಪೋಲ್ ಟೆಕ್ಸಾಸ್ನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಹೈದರಾಬಾದ್ನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಮುಗಿಸಿದ ನಂತರ ಉನ್ನತ ಅಧ್ಯಯನಕ್ಕಾಗಿ 2023 ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
ಬಿಆರ್ಎಸ್ ಶಾಸಕ ಸುಧೀರ್ ರೆಡ್ಡಿ ಮತ್ತು ಮಾಜಿ ಸಚಿವ ಟಿ ಹರೀಶ್ ರಾವ್ ಅವರು ಹೈದರಾಬಾದ್ನಲ್ಲಿರುವ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪೋಲ್ ಅವರ ಮೃತದೇಹವನ್ನು ಅಮೆರಿಕದಿಂದ ವಾಪಸ್ ತರಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವುದು ಎಂದು ಅವರು ಹೇಳಿದರು.
"ತಮ್ಮ ಮಗನ ಯಶಸ್ಸಿಗಾಗಿ ಹಾತೊರೆಯುತ್ತಿದ್ದ ಪೋಷಕರ ನೋವು ಹೃದಯ ವಿದ್ರಾವಕವಾಗಿದೆ" ಎಂದು ಹರೀಶ್ ರಾವ್ ಪೋಸ್ಟ್ನಲ್ಲಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. "ಚಂದ್ರ ಶೇಖರ್ ಅವರ ಮೃತದೇಹವನ್ನು ಆದಷ್ಟು ಬೇಗ ಅವರ ಊರಿಗೆ ತರಲು ರಾಜ್ಯ ಸರ್ಕಾರವು ಉಪಕ್ರಮ ಕೈಗೊಳ್ಳಬೇಕು ಮತ್ತು ಪ್ರಯತ್ನಗಳನ್ನು ಮಾಡಬೇಕು ಎಂದು ನಾವು ಬಿಆರ್ಎಸ್ ಪರವಾಗಿ ಒತ್ತಾಯಿಸುತ್ತೇವೆ." ಎಂದು ಹೇಳಿದ್ದಾರೆ.