ರೋಮ್, ಅ. 04 (DaijiworldNews/AA): ಇಟಲಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಭಾರತೀಯ ಮೂಲದ ಉದ್ಯಮಿ ಮತ್ತು ಆತನ ಪತ್ನಿ ಮೃತಪಟ್ಟಿದ್ದು, ದಂಪತಿಯ ಪುತ್ರಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಗ್ರೊಸೆಟೊ ಬಳಿಯ ಔರೆಲಿಯಾ ಹೆದ್ದಾರಿಯಲ್ಲಿ ಏಷ್ಯನ್ ಮೂಲದ ಪ್ರವಾಸಿಗರನ್ನು ಹೊತ್ತ ವ್ಯಾನ್ ಮತ್ತು ಮಿನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಿನಿಬಸ್ ಚಾಲಕ ಮತ್ತು ಭಾರತದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ನಾಗ್ಪುರ ಮೂಲದ ಹೋಟೆಲಿಯರ್ ಜಾವೇದ್ ಅಖ್ತರ್ (55) ಮತ್ತು ಅವರ ಪತ್ನಿ ನಾಡಿರಾ ಗುಲ್ಶನ್ (47) ಮೃತಪಟ್ಟಿದ್ದಾರೆ. ಇವರು ತಮ್ಮ ಮೂವರು ಮಕ್ಕಳಾದ ಅರ್ಜೂ ಅಖ್ತರ್, ಶಿಫಾ ಅಖ್ತರ್, ಜಾಝೆಲ್ ಅಖ್ತರ್ ಪ್ರಯಾಣಿಸುತ್ತಿದ್ದರು.
ಈ ದಂಪತಿಯ ಮಗಳು ಅರ್ಜೂ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇನ್ನಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಟಲಿಯ ಭಾರತೀಯ ರಾಯಭಾರ ಕಚೇರಿ ನಾಗ್ಪುರ ದಂಪತಿ ಸಾವಿಗೆ ಸಂತಾಪ ಸೂಚಿಸಿದೆ. ಅವರ ಕುಟುಂಬಕ್ಕೆ ಅಗತ್ಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ.