ಇಸ್ಲಾಮಾಬಾದ್, ಅ. 03 (DaijiworldNews/TA): ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ನಲ್ಲಿ ಭುಗಿಲೆತ್ತಿದ ಅಸಮಾಧಾನದ ಅಲೆ ಈಗ ಇಸ್ಲಾಮಾಬಾದ್ನವರೆಗೂ ವ್ಯಾಪಿಸಿದೆ. ಕಾಶ್ಮೀರ ಕ್ರಿಯಾ ಸಮಿತಿಯು ಆಯೋಜಿಸಿದ್ದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ, ರಾಷ್ಟ್ರೀಯ ಪ್ರೆಸ್ ಕ್ಲಬ್ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ಭಂಗಪಡಿಸಲು ಪಾಕಿಸ್ತಾನ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಾಗಿ ವರದಿಯಾಗಿದೆ.

ಪಿಒಕೆ ಪ್ರದೇಶದಲ್ಲಿ ಬಹುಕಾಲದಿಂದ ಇದ್ದ ತಾರತಮ್ಯ, ಆಡಳಿತದ ಅನ್ಯಾಯ ಮತ್ತು ಇಂಟರ್ನೆಟ್ ಕಡಿತದ ವಿರುದ್ಧ ಸಾರ್ವಜನಿಕರ ಅಸಮಾಧಾನ ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರತಿಭಟನೆ ರೂಪದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಪಾಕಿಸ್ತಾನ ಸರ್ಕಾರ ಈ ಚಳವಳಿಯನ್ನು ಹತ್ತಿಕ್ಕಲು ಲಾಠಿಚಾರ್ಜ್, ಗೋಲಿಬಾರ್, ಬಂಧನ ಸೇರಿದಂತೆ ಧಮನಕಾರಿ ನೀತಿಯನ್ನು ಅನುಸರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇಸ್ಲಾಮಾಬಾದ್ನಲ್ಲಿ ಕಾಶ್ಮೀರ ಕ್ರಿಯಾ ಸಮಿತಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಕೀಲರು ಮತ್ತು ಮಾಧ್ಯಮ ಕಾರ್ಯಕರ್ತರು ಎನ್ಪಿಸಿ (ನ್ಯಾಷನಲ್ ಪ್ರೆಸ್ ಕ್ಲಬ್) ಆವರಣದ ಹೊರಗೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ, ಸ್ಥಳೀಯ ಪೊಲೀಸರು ಬಲವಂತವಾಗಿ ಪ್ರವೇಶಿಸಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಹಲವರಿಗೆ ಗಾಯಗಳಾಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ಮೂಲಗಳು ಹೇಳುತ್ತಿವೆ.
ಈ ಘಟನೆ ಪಾಕಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಗತಿಗೆ ಗಂಭೀರ ಪ್ರಶ್ನೆಯನ್ನು ಎಬ್ಬಿಸಿದೆ. ಪಿಒಕೆನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳು, ಈಗ ಇಸ್ಲಾಮಾಬಾದ್ನಲ್ಲಿಯೂ ಸಹ ಚರ್ಚೆಗೆ ಗ್ರಾಸವಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಧಮನಕಾರಿ ನಡೆಗೆ ತೀವ್ರ ಖಂಡನೆ ವ್ಯಕ್ತವಾಗುವ ನಿರೀಕ್ಷೆ ಇದೆ.