ಲಂಡನ್, ಸೆ. 30 (DaijiworldNews/AA): ಲಂಡನ್ನ ಟ್ಯಾವಿಸ್ಟಾಕ್ ಸ್ಕ್ವೇರ್ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಭಾರತದ ಹೈಕಮಿಷನ್ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆಯನ್ನು ಖಂಡಿಸಿದೆ. ಇದು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಕಿಡಿಕಾರಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವುದನ್ನು ಚಿತ್ರಿಸುವ ಈ ಪ್ರತಿಮೆಯ ಪೀಠದ ಮೇಲೆ ಭಾರತ ವಿರೋಧಿ ಬರಹಗಳು ಬರೆದಿರುವುದು ಕಂಡುಬಂದಿವೆ. ಪ್ರತಿಮೆಯ ಮೇಲೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. ವಿಶ್ವಸಂಸ್ಥೆಯು ಅಕ್ಟೋಬರ್ 2ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದ್ದು, ಆ ದಿನದಂದು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಭಜನೆಗಳನ್ನು ಹಾಡಲಾಗುತ್ತದೆ.
ಕಲಾವಿದೆ ಫ್ರೆಡ್ಡಾ ಬ್ರಿಲಿಯಂಟ್ ಕೆತ್ತಿದ ಮತ್ತು ಇಂಡಿಯಾ ಲೀಗ್ನ ಬೆಂಬಲದೊಂದಿಗೆ ರಚಿಸಿದ ಈ ಕಂಚಿನ ಪ್ರತಿಮೆಯನ್ನು 1968 ರಲ್ಲಿ ಚೌಕದಲ್ಲಿ ಲೋಕಾರ್ಪಣೆ ಮಾಡಲಾಯಿತು. ಮಹಾತ್ಮ ಗಾಂಧಿಯವರು ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರು.
ಭಾರತೀಯ ಹೈಕಮಿಷನ್ ಈ ವಿಷಯವನ್ನು ಸ್ಥಳೀಯ ಆಡಳಿತ ಮತ್ತು ಮೆಟ್ರೋಪಾಲಿಟನ್ ಪೊಲೀಸರೊಂದಿಗೆ ಮಾಹಿತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದು ಹೇಳಿದೆ. ಭಾರತೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪ್ರತಿಮೆಯನ್ನು ದುರಸ್ತಿ ಕೆಲಸ ಮಾಡುತ್ತಿದ್ದಾರೆ.