ಇಸ್ಲಾಮಾಬಾದ್/ದುಬೈ,ಸೆ. 29 (DaijiworldNews/AK): ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನದ ಸಚಿವ, ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಭಾನುವಾರ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಭಾರತ ಗೆದ್ದ ಬಳಿಕ ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದರು. ʻಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರʼಫಲಿತಾಂಶ ಒಂದೇ – ಭಾರತ ಗೆಲ್ಲುತ್ತದೆ ಎಂದು ಆಟಗಾರರಿಗೆ ಶುಭಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಖ್ವಿ, ಯುದ್ಧವನ್ನು ಕ್ರೀಡೆಗೆ ಎಳೆದು ತರೋದು ಹತಾಶೆ ತೋರಿದ್ದಾರೆಂದು ಬರೆದುಕೊಂಡಿದ್ದಾರೆ.
ಯುದ್ಧವೇ ನಿಮ್ಮ ಮಾನದಂಡವಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನೀವು ಅನುಭವಿಸಿದ ಅವಮಾನಕರ ಸೋಲುಗಳನ್ನ ಇತಿಹಾಸವು ಈಗಾಗಲೇ ದಾಖಲಿಸಿದೆ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನ ಪುನಃ ಬರೆಯಲು ಸಾಧ್ಯವಿಲ್ಲ. ಆದ್ರೆ ಯುದ್ಧವನ್ನ ಕ್ರೀಡೆಗೆ ಎಳೆದುತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ. ಜೊತೆಗೆ ಆಟದ ಸ್ಫೂರ್ತಿ ಮತ್ತು ಗೌರವವನ್ನು ಅವಮಾನಿಸುತ್ತದೆ ಎಂದು ನಖ್ವಿ ತಿರುಗೇಟು ನೀಡಿದ್ದಾರೆ.
ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು. ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯ ಆಚರಿಸಬೇಕಾಯಿತು.
ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.