ನ್ಯೂಯಾರ್ಕ್, 28 (DaijiworldNews/TA): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತಾನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಿ, ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರವೆಂದು ಬಿಂಬಿಸಿದರು. ವಿಶ್ವಸಂಸ್ಥೆಯೇ ಗೊತ್ತುಪಡಿಸಿರುವ ಭಯೋತ್ಪಾದಕರ ಪಟ್ಟಿಯಲ್ಲಿ ಒಂದೇ ದೇಶದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಅವರು, ಆ ದೇಶವೇ ಪಾಕಿಸ್ತಾನ ಎಂದು ಹೇಳಿದರು.

ಪಾಕಿಸ್ತಾನ, ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯನ್ನೇ ಆಗಿಸಿಕೊಂಡಿದ್ದು, ದಶಕಗಳ ಹಿಂದಿನಿಂದ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಆಗಿ ಮುಂದುವರಿದಿದೆ ಎಂದು ಜೈಶಂಕರ್ ಆರೋಪಿಸಿದರು. ಅವರು ಪಹಲ್ಗಾಮ್ನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, 26 ಅಮಾಯಕ ಪ್ರವಾಸಿಗರ ಹತ್ಯೆಗೆ ಪಾಕಿಸ್ತಾನ ಮೂಲದ ಉಗ್ರರು ಹೊಣೆದಾರರಾಗಿದ್ದಾರೆ ಎಂದು ಹೇಳಿದರು. ಈ ಘಟನೆಯ ಪ್ರಕಾರವೇ ಭಾರತ "ಆಪರೇಷನ್ ಸಿಂಧೂರ್" ಎಂಬ ಭದ್ರತಾ ಕಾರ್ಯಾಚರಣೆಯನ್ನು ಆರಂಭಿಸಿ, ನೆರೆಯ ದೇಶದೊಳಗೆ ಅಡಗಿದ್ದ ಉಗ್ರರ ನೆಲೆಗಳನ್ನು ನೆಲಸಮಗೊಳಿಸಿತು ಎಂದು ಅವರು ವಿವರಿಸಿದರು.
ಜೈಶಂಕರ್ ಅವರು ತಮ್ಮ ಭಾಷಣದಲ್ಲಿ, “ಭಾರತವು ಸ್ವಾತಂತ್ರ್ಯದ ನಂತರದಿಂದಲೂ ಭಯೋತ್ಪಾದನೆಯಂತಹ ಭೀಕರ ಸವಾಲನ್ನು ಎದುರಿಸುತ್ತಿದೆ. ನಮ್ಮ ಪಕ್ಕದಲ್ಲಿರುವ ರಾಷ್ಟ್ರವೇ ಈ ಸಮಸ್ಯೆಗೆ ಮೂಲವಾಗಿದೆ. ಅನೇಕ ಅಂತರರಾಷ್ಟ್ರೀಯ ಭಯೋತ್ಪಾದಕ ದಾಳಿಗಳ ಮೂಲ ಅದೇ ದೇಶದಲ್ಲಿ ಇರುವ ಉಗ್ರರು,” ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನ ತನ್ನ ಭಯೋತ್ಪಾದಕರನ್ನು ಸಾರ್ವಜನಿಕವಾಗಿ ಗೌರವಿಸುತ್ತಿದೆ, ಭಯೋತ್ಪಾದನಾ ಕೇಂದ್ರಗಳು ಕೈಗಾರಿಕಾ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ವಿಶ್ವ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದನೆಗೆ ಹಣಕಾಸು ಒದಗಿಸುವ ವ್ಯವಸ್ಥೆಗಳನ್ನು ತಕ್ಷಣವೇ ತಡೆಯಬೇಕು ಮತ್ತು ಇಂತಹ ರಾಷ್ಟ್ರಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ತರುವ ಅಗತ್ಯವಿದೆ ಎಂದು ಜೈಶಂಕರ್ ವಿಶ್ವಸಂಸ್ಥೆಗೆ ಮನವಿ ಮಾಡಿದರು. ಪಾಕಿಸ್ತಾನದ ವಿರುದ್ಧ ನೀಡಿದ ಈ ಕಠಿಣ ಪ್ರತಿಕ್ರಿಯೆ ಜಾಗತಿಕ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯ ಬಾಗಿಲು ತೆರೆಯುವ ಸಾಧ್ಯತೆಯಿದೆ.