ಢಾಕಾ, ಸೆ. 25 (DaijiworldNews/TA): ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನವದೆಹಲಿಯಲ್ಲಿ ಆಶ್ರಯ ನೀಡಲಾಗಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನಕ್ಕಾಗಿ ನ್ಯೂಯಾರ್ಕ್ಗೆ ತೆರಳಿರುವ ಯೂನಸ್, ಭಾರತ ಶೇಖ್ ಹಸೀನಾ ವಿರೋಧಿ ವಿದ್ಯಾರ್ಥಿ ಚಳವಳಿಗೆ ಅಸಹಕಾರ ತೋರಿಸಿದ್ದು, ಇದರ ಪರಿಣಾಮವಾಗಿ ಬಿಗುವು ಉಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಕ್ಟೋಬರ್ 5, 2024ರಂದು ಶೇಖ್ ಹಸೀನಾ 15 ವರ್ಷಗಳ ಆಡಳಿತ ಪತನಗೊಂಡ ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಬಾಂಗ್ಲಾದೇಶದ ವಿದ್ಯಾರ್ಥಿಗಳು ದೇಶದಾದ್ಯಂತ ನಡೆಸಿದ ಬೃಹತ್ ಪ್ರತಿಭಟನೆಗಳು ಕೊನೆಗೆ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಗಿದ್ದು, ಈ ಘಟನೆಗಳು ಭಾರತದ ನಿರೀಕ್ಷೆಗಳಿಗೆ ವಿರುದ್ಧವಾಗಿದ್ದವು ಎಂದು ಯೂನಸ್ ದೂರಿದರು.
ವಿದ್ಯಾರ್ಥಿ ಚಳವಳಿಯು 'ಇಸ್ಲಾಮಿಕ್ ಚಳವಳಿ' ಎಂಬ ಹಣೆಪಟ್ಟಿಯನ್ನು ಹೊರುವಂತಾಗಿದೆ ಎಂಬ ನಕಲಿ ಸುದ್ದಿಗಳನ್ನು ಯೂನಸ್ ತೀವ್ರವಾಗಿ ಟೀಕಿಸಿದರು. ಪ್ರತಿಭಟನೆ ಇಸ್ಲಾಮಿಕ ಶ್ರದ್ಧೆಗಳ ಮೇಲೆ ಆಧಾರಿತವಾಗಿರಲಿಲ್ಲ, ಅದು ದೇಶದ ಒಳರಾಜಕೀಯ ಕ್ರಾಂತಿಯ ಭಾಗವಾಗಿತ್ತೆಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿಯೇ ಅವರು ಸಾರ್ಕ್ ರಾಷ್ಟ್ರಗಳನ್ನು “ಆಪ್ತ ಕುಟುಂಬದ ಸದಸ್ಯರು” ಎಂದು ಬಣ್ಣಿಸಿ, ಸುಮಾರು ಒಂದು ದಶಕದಿಂದ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾದ ಸಹಕಾರ ವೇದಿಕೆಯ ಪುನರುಜ್ಜೀವನಕ್ಕೆ ಕರೆ ನೀಡಿದರು. ಪ್ರಾದೇಶಿಕ ಸಹಕಾರ ಹಾಗೂ ಸಮಗ್ರ ಅಭಿವೃದ್ಧಿಗೆ ಸಾರ್ಕ್ ಮುಖ್ಯ ಕೊಂಡಿಯಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
ಇದರ ನಡುವೆ, ಈ ವರ್ಷ ಏಪ್ರಿಲ್ನಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆದ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮೊಹಮ್ಮದ್ ಯೂನಸ್ ಅವರು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮೋದಿ, ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ, ಶಾಂತಿ ಹಾಗೂ ಸ್ಥಿರತೆಗೆ ಭಾರತದ ಸಮರ್ಪಿತ ಬೆಂಬಲವಿದೆ ಎಂಬುದನ್ನು ಪುನರುಚ್ಚರಿಸಿದ್ದರು.