ಬೀಜಿಂಗ್, ಸೆ. 23 (DaijiworldNews/TA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಘೋಷಿಸಿದ ಹೊಸ 100,000 ಯುಎಸ್ಡಿ ಶುಲ್ಕ ವೀಸಾ ಶುಲ್ಕವು ಜಾಗತಿಕವಾಗಿ ಭೀತಿ ಮತ್ತು ಗೊಂದಲ ಉಂಟುಮಾಡುತ್ತಿರುವ ಸಂದರ್ಭದಲ್ಲೇ, ಚೀನಾ ತನ್ನ ಮುಂದಾಳುತನದ ತಂತ್ರದಲ್ಲಿ ಹೊಸ ಪುಟ ತೆರೆಯಲು ಸಜ್ಜಾಗಿದೆ. ದೇಶದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಅಂತರರಾಷ್ಟ್ರೀಯ ಯುವ ಪ್ರತಿಭೆಗಳನ್ನು ಆಕರ್ಷಿಸಲು ಬೀಜಿಂಗ್ ‘K ವೀಸಾ’ ಎಂಬ ಹೊಸ ವೀಸಾ ವರ್ಗವನ್ನು ಘೋಷಿಸಿದೆ.

ಚೀನಾದ ಪ್ರಧಾನಮಂತ್ರಿ ಲಿ ಕಿಯಾಂಗ್ ಸಹಿ ಹಚ್ಚಿದ ಹೊಸ ಸುಗ್ರೀವಾಜ್ಞೆಯಂತೆ, ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ಕೆ ವೀಸಾ, ವೈಜ್ಞಾನಿಕ, ತಂತ್ರಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಯುವ ವಿದೇಶಿಗರಿಗೆ ಅನುಕೂಲವಾಗಲಿದೆ. ಈ ವೀಸಾ ಅರ್ಜಿದಾರರಿಗೆ ವಯೋಮಿತಿ, ಶೈಕ್ಷಣಿಕ ಅರ್ಹತೆ ಅಥವಾ ಉದ್ಯೋಗದಾತರ ಆಹ್ವಾನಪತ್ರವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದೆ. ಅರ್ಜಿ ಪ್ರಕ್ರಿಯೆ ಕೂಡ ಸರಳೀಕೃತವಾಗಿದ್ದು, ಇದನ್ನು ಬಯಸುವವರು ಚೀನಾದ ಪ್ರಸ್ತುತ 12 ಸಾಮಾನ್ಯ ವೀಸಾ ಪ್ರಕಾರಗಳಿಗೆ ಹೋಲಿಸಿದರೆ ಹೆಚ್ಚು ಅನುಕೂಲವನ್ನು ಪಡೆಯಲಿದ್ದಾರೆ.
ಚೀನಾದ ಈ ಹೊಸ ನಿಟ್ಟನ್ನು ವಿಶ್ವದ ಅದೆಷ್ಟೋ ರಾಷ್ಟ್ರಗಳ ತಂತ್ರಜ್ಞಾನ ಉದ್ಯೋಗಿಗಳು ಗಮನಿಸುತ್ತಿದ್ದಾರೆ. ಅಮೆರಿಕವು H-1B ವೀಸಾ ಅರ್ಜಿಗೆ ಹೊಸದಾಗಿ $100,000 ಶುಲ್ಕ ವಿಧಿಸಿರುವುದು, ಹೆಚ್ಚಿನ ಭದ್ರತಾ ಖರ್ಚು, ಸ್ಥಳೀಯ ಉದ್ಯೋಗ ರಕ್ಷಣೆ ಮತ್ತು ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಬಹುತೇಕ ಯುವ ವೃತ್ತಿಪರರಲ್ಲಿ ನಿರಾಶೆ ಮೂಡಿಸಿದೆ. ಇತ್ತೀಚಿನ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 21, 2025 ರಿಂದ ಹೊಸ H-1B, “ಗೋಲ್ಡ್ ಕಾರ್ಡ್” ಎಂಬ ಹೆಸರಿನಲ್ಲಿ ಹೊಸ ವಲಸೆ ಯೋಜನೆಯನ್ನು ಕೂಡ ಪರಿಚಯಿಸಿದ್ದಾರೆ, ಇದರಲ್ಲಿ $1 ಮಿಲಿಯನ್ ಹಣ ಹೂಡಿದರೆ ಅಮೆರಿಕನ್ ನಿವಾಸ ಸಾಧ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ, ಚೀನಾದ ಹೊಸ ಕೆ ವೀಸಾ ಘೋಷಣೆ ಕೇವಲ ಸಮಯೋಚಿತವಷ್ಟೇ ಅಲ್ಲ, ಇದೊಂದು ತಂತ್ರಜ್ಞಾನ ಯುದ್ಧದ ತಾರ್ಕಿಕ ಮುಂದುವರಿಕೆಯಾಗಿದೆಯೆನ್ನಬಹುದು. ಚೀನಾ ಈಗಾಗಲೇ ವಿಶ್ವದ 75 ದೇಶಗಳೊಂದಿಗೆ ವೀಸಾ-ಮುಕ್ತ ಅಥವಾ ಪರಸ್ಪರ ವೀಸಾ ವಿನಾಯಿತಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇತ್ತೀಚಿನ ಆರೈವುದರಲ್ಲಿ 2025 ರ ಮೊದಲಾರ್ಧದಲ್ಲಿ 38 ಮಿಲಿಯನ್ ವಿದೇಶೀ ಪ್ರವಾಸಿಗಳು ದೇಶಕ್ಕೆ ಭೇಟಿ ನೀಡಿದರೆಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತವೆ. ಇದರಲ್ಲೂ 13.6 ಮಿಲಿಯನ್ ಪ್ರವಾಸಿಗಳು ವೀಸಾ-ಮುಕ್ತ ಪ್ರವೇಶ ಪಡೆದಿದ್ದರು, ಇದು ಶೇಕಡಾ 53.9ರಷ್ಟು ವರ್ಷಾನು ವರ್ಷದ ಬೆಳವಣಿಗೆ.
ಬೀಜಿಂಗ್ ತನ್ನ ಈ ಕ್ರಮದ ಹಿಂದಿನ ಉದ್ದೇಶವನ್ನು ಸರಳವಾಗಿ ವಿವರಿಸಿದ್ದು, "ಚೀನಾದ ಮುಂದಿನ ಅಭಿವೃದ್ಧಿಗೆ ಜಾಗತಿಕ ಮಟ್ಟದ ಪ್ರತಿಭೆಗಳ ಪಾಲ್ಗೊಳ್ಳುವಿಕೆ ಅವಶ್ಯಕ. ನಾವು ಅವರನ್ನು ಸ್ವಾಗತಿಸುತ್ತೇವೆ, ಅವಕಾಶಗಳನ್ನು ಒದಗಿಸುತ್ತೇವೆ," ಎಂದು ಚೀನಾದ ವಲಸೆ ಮತ್ತು ವೀಸಾ ಆಡಳಿತ ಸಂಸ್ಥೆಗಳು ಹೇಳಿವೆ.
ವಿಶ್ವದ ಯುವ ವಿಜ್ಞಾನಿಗಳ ಪಾಲಿಗೆ, ಇದೀಗ ಅಮೆರಿಕ ಮಾತ್ರವಲ್ಲದೆ ಚೀನಾವನ್ನು ಸಹ ಗಮನದಲ್ಲಿಟ್ಟುಕೊಳ್ಳುವ ಕಾಲ ಬಂದಿದೆ. ಹೊಸ ಯುಗದ ಪ್ರಗತಿಯ ಸ್ಪರ್ಧೆಯಲ್ಲಿ ಯಾವುದೂ ನಿಶ್ಚಿತವಲ್ಲ, ಆದರೆ ನಂಬಿಕೆಯಿಂದ ಮುನ್ನಡೆದವರು ಮಾತ್ರ ಮುಂದಿರುವ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಿರುತ್ತದೆ.