ಅಮೇರಿಕಾ, ಸೆ.21 (DaijiworldNews/TA): ನ್ಯೂ ಹ್ಯಾಂಪ್ಶೈರ್ನ ನಶುವಾದ ಸ್ಕೈ ಮೆಡೋ ಕಂಟ್ರಿ ಕ್ಲಬ್ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಶುವಾದ ಅಟಾರ್ನಿ ಜನರಲ್ ಕಚೇರಿಯು, ಒಬ್ಬ ವ್ಯಕ್ತಿ ಕ್ಲಬ್ಗೆ ಪ್ರವೇಶಿಸಿ ಹಲವಾರು ಗುಂಡು ಹಾರಿಸಿದ್ದಾನೆ, ಇದರಿಂದ ಒಬ್ಬರು ಸಾವನ್ನಪ್ಪಿ, ಇತರರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಗಾಯಗೊಂಡವರ ನಿಖರ ಸಂಖ್ಯೆಯನ್ನು ಪೊಲೀಸ್ ಪ್ರಕಟಣೆ ನೀಡಿಲ್ಲ.
ನಶುವಾ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ “ವೀಡಿಯೊ ಪರಿಶೀಲನೆಯಲ್ಲಿ ಒಂದೇ ಶೂಟರ್ ಇದ್ದು, ಆತನನ್ನು ಈಗ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಕ್ರಿಯ ತನಿಖೆ ನಡೆಯುತ್ತಿದೆ, ಆದರೆ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ. ನಶುವಾದ ತಾರಾ ಬೌಲೆವಾರ್ಡ್ನಲ್ಲಿರುವ ಶೆರಾಟನ್ ಹೋಟೆಲ್ ಆಶ್ರಯ ಕೇಂದ್ರವಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಕೈ ಮೆಡೋ ಪ್ರದೇಶದಿಂದ ಸಾರ್ವಜನಿಕರನ್ನು ದೂರ ಇರಲು ವಿನಂತಿ ಮಾಡಿದ್ದಾರೆ.