ವಾಷಿಂಗ್ಟನ್, ಸೆ. 20 (DaijiworldNews/AA): ಹೆಚ್-1ಬಿ ವೀಸಾಗಳ ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್ಗೆ ಏರಿಕೆ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ.

ವಿದೇಶಿ ಕೆಲಸಗಾರರಿಗೆ ವಾರ್ಷಿಕ 1,00,000 ಡಾಲರ್ ವೀಸಾ ಶುಲ್ಕವನ್ನು ವಿಧಿಸುವ ಘೋಷಣೆಗೆ ಟ್ರಂಪ್ ಸಹಿ ಹಾಕಿದ್ದಾರೆ. ಶ್ರೀಮಂತ ವ್ಯಕ್ತಿಗಳಿಗೆ ಯುಎಸ್ ಪೌರತ್ವವನ್ನು ಪಡೆಯುವ ಮಾರ್ಗವಾಗಿ 1 ಮಿಲಿಯನ್ ಡಾಲರ್ 'ಗೋಲ್ಡ್ ಕಾರ್ಡ್' ವೀಸಾವನ್ನು ಜಾರಿಗೆ ತಂದಿದ್ದಾರೆ.
ಅಮೆರಿಕ ಉದ್ಯೋಗಿಗಳ ರಕ್ಷಣೆಗೆ ಹೊಸ ಕ್ರಮಕ್ಕೆ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಹೆಚ್-1ಬಿ ವೀಸಾ ಶುಲ್ಕ ಏರಿಕೆ ಮಾಡುವ ನಿಯಮವು ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಉಂಟುಮಾಡಲಿದೆ.
ಹೆಚ್-1ಬಿ ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್ ಕಂಪನಿಗಳಿಗೆ ಕಷ್ಟ. ಹೀಗಾಗಿ, ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್-1ಬಿ ವೀಸಾ ಕ್ರಮ ಅಮೆರಿಕದಲ್ಲಿ ಜಾರಿಯಲ್ಲಿದೆ. ಈಗ, ಈ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರೆ ದೇಶಗಳಿಂದ ನುರಿತರನ್ನು ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್ ಪಾವತಿ ಮಾಡಬೇಕಾಗುತ್ತದೆ.