ಕ್ಯಾಲಿಫೋರ್ನಿಯಾ, ಸೆ. 19(DaijiworldNews/TA): ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ಪ್ರದೇಶದಲ್ಲಿ ಭಾರತ ಮೂಲದ ಟೆಕ್ಕಿ, 30 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಮೇಲೆ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 3 ರಂದು ಈ ಘಟನೆ ನಡೆದಿದ್ದು, ನಿಜಾಮುದ್ದೀನ್ ಅವರು ತಮ್ಮ ರೂಮ್ಮೇಟ್ ಮೇಲೆ ಚಾಕುವಿನಿಂದ ದಾಳಿ ಮಾಡಿದ ನಂತರ ಪೊಲೀಸರ ಪ್ರತಿಕ್ರಿಯೆಯಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ನಿಜಾಮುದ್ದೀನ್ ಚಾಕು ಹಿಡಿದು ತಮ್ಮ ರೂಮ್ಮೇಟ್ನ ಮೇಲೆ ಹಲ್ಲೆ ನಡೆಸಿದ್ದಾರೆಯೆಂಬ ಕರೆ ಪಡೆದ ನಂತರ ಅವರು ಸ್ಥಳಕ್ಕೆ ಧಾವಿಸಿದರು. ಅವರನ್ನು ತಡೆಯುವ ಪ್ರಯತ್ನದಲ್ಲಿ, ನಿಜಾಮುದ್ದೀನ್ ಮತ್ತೆ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಆತ್ಮರಕ್ಷಣಾರ್ಥವಾಗಿ ಪೊಲೀಸರು ಗುಂಡು ಹಾರಿಸಿದರು ಎಂದು ತಿಳಿಸಲಾಗಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ನಿಜಾಮುದ್ದೀನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮರಣ ಹೊಂದಿದರು. ಘಟನಾ ಸ್ಥಳದಲ್ಲಿ ಇಬ್ಬರು ಚಾಕುಗಳೂ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ರೂಮ್ಮೇಟ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ನಿಜಾಮುದ್ದೀನ್ ತೆಲಂಗಾಣದ ಮಹಬೂಬ್ನಗರ ಜಿಲ್ಲೆಯ ನಿವಾಸಿಯಾಗಿದ್ದು, ಅವರು ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಈ ಹತ್ಯೆಯ ವಿಚಾರವನ್ನು ನಿಜಾಮುದ್ದೀನ್ ಅವರ ಸ್ನೇಹಿತನಿಂದ ತಿಳಿದುಕೊಂಡ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು, ತಮ್ಮ ಮಗನ ಶವವನ್ನು ತಕ್ಷಣ ಭಾರತಕ್ಕೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಹಸ್ನುದ್ದೀನ್ ಅವರ ಪ್ರಕಾರ, ನಿಜಾಮುದ್ದೀನ್ ಶಾಂತ ಸ್ವಭಾವದವನು, ಯಾರ ಮೇಲೂ ಹಲ್ಲೆ ಮಾಡುವ ವ್ಯಕ್ತಿಯಲ್ಲ. ಈ ದಾಳಿ ಹಿಂದಿನ ನಿಜವಾದ ಕಾರಣ ತಿಳಿಯಬೇಕೆಂಬ ಒತ್ತಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರು ಶಂಕಿಸಿರುವುದೇನಂದರೆ, ಈ ಘಟನೆಗೆ ಜನಾಂಗೀಯ ತಾರತಮ್ಯವೇ ಕಾರಣವಾಗಿರಬಹುದೆಂದು. ಇದು ಸುಪ್ತವಾಗಿ ನಡೆಯುತ್ತಿರುವ ವಿದೇಶಿ ವಿರೋಧದ ಹಾಗೂ ಬೇಧಭಾವದ ಮತ್ತೊಂದು ಉದಾಹರಣೆಯಾಗಬಹುದೆಂಬ ಭೀತಿ ತೀವ್ರವಾಗಿದೆ.
ಈ ಮಧ್ಯೆ, ಘಟನೆ ಕುರಿತು ಸ್ಪಷ್ಟನೆ ನೀಡಿದ ಪೊಲೀಸರು, ನಿಜಾಮುದ್ದೀನ್ ಅವರಲ್ಲಿ ಹೆಚ್ಚಿನ ಅಪಾಯದ ಲಕ್ಷಣಗಳು ಕಂಡುಬಂದ ಕಾರಣ, ಬೇರಾವುದೇ ದಾರಿಯಿಲ್ಲದ ಕಾರಣದಿಂದಲೇ ಗುಂಡು ಹಾರಿಸಿದವರು ಎಂದು ಹೇಳಿದ್ದಾರೆ. ಆದರೆ ಈ ವಿಷಯವು ಈಗ ಸಾರ್ವಜನಿಕ ಚರ್ಚೆಗೆ ಗುರಿಯಾಗಿದ್ದು, ಪೊಲೀಸರು ಶಸ್ತ್ರಬಲ ಬಳಸದೆ ತಡೆಯಬಹುದಿತ್ತು ಎಂಬ ಪ್ರಶ್ನೆಗಳೂ ಎದ್ದಿವೆ.
ಇತ್ತೀಚೆಗೆ ಟೆಕ್ಸಾಸ್ನಲ್ಲಿ ಭಾರತ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಶಿರಚ್ಛೇದ ಮಾಡಿದ ಘಟನೆ ಕೂಡ ವರದಿಯಾಗಿದ್ದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಭಾರತೀಯರ ಸುರಕ್ಷತೆ ಮತ್ತು ಮೂಲಭೂತ ಹಕ್ಕುಗಳ ಕುರಿತು ಮತ್ತೊಮ್ಮೆ ಚಿಂತನೆ ಶುರುವಾಗಿದೆ. ನಿಜಾಮುದ್ದೀನ್ ಅವರ ಹತ್ಯೆ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ ಎಂಬುದು ಅವರ ಕುಟುಂಬ ಮತ್ತು ಭಾರತೀಯ ಸಮುದಾಯದ ಒತ್ತಾಯವಾಗಿದೆ.