ವಾಷಿಂಗ್ಟನ್, ಸೆ. 16 (DaijiworldNews/AA): ವೆನೆಜುವೆಲಾದಿಂದ ಮಾದಕವಸ್ತುಗಳನ್ನು ಸಾಗಿಸುತ್ತಿತ್ತು ಎಂಬ ಆರೋಪದಲ್ಲಿ ಬೋಟ್ ಮೇಲೆ ದಾಳಿ ನಡೆಸಿ, ಹಡಗಿನಲ್ಲಿದ್ದ ಮೂವರನ್ನು ಯುಎಸ್ ಸೇನೆ ಕೊಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್ ಪೋಸ್ಟ್ ಮಾಡಿರುವ ಟ್ರಂಪ್, "ವೆನೆಜುವೆಲಾ ಈ ಬಗ್ಗೆ ದೃಢೀಕರಿಸಿತ್ತು. ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಅಕ್ರಮ ಮಾದಕವಸ್ತುಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆದಿದೆ. ಈ ಅತ್ಯಂತ ಹಿಂಸಾತ್ಮಕ ಮಾದಕವಸ್ತು ಕಳ್ಳಸಾಗಣೆಯು ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕದ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆ ಒಡ್ಡುತ್ತಿವೆ" ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಮ್ಮ ಬಳಿ ಪುರಾವೆಗಳಿವೆ. ಸಮುದ್ರ ಮಾರ್ಗದಲ್ಲಿ ಡ್ರಗ್ ಕಳ್ಳಸಾಗಣೆ ಹೆಚ್ಚಾಗಿದೆ. ಅಮೆರಿಕದ ಮಿಲಿಟರಿ ದಾಳಿಗಳನ್ನು ಭೂಪ್ರದೇಶಕ್ಕೂ ವಿಸ್ತರಿಸಬಹುದು" ಎಂದು ಸುಳಿವು ನೀಡಿದ್ದಾರೆ.
"ಈ ತಿಂಗಳ ಆರಂಭದಲ್ಲಿ ಮೊದಲ ದಾಳಿ ನಡೆಸಿದ ನಂತರ, ಕೆರಿಬಿಯನ್ನಲ್ಲಿ ಅಮೆರಿಕದ ಮಿಲಿಟರಿಗೆ ಕಡಿಮೆ ಹಡಗುಗಳು ಕಾಣಿಸಿಕೊಂಡಿವೆ. ಆದರೆ, ಭೂಮಾರ್ಗದ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ" ಎಂದಿದ್ದಾರೆ.