ಮಾಸ್ಕೋ, ಸೆ. 13 (DaijiworldNews/AA): ರಷ್ಯಾದ ಕರಾವಳಿಯಲ್ಲಿ ಶನಿವಾರ ಬೆಳಗಿನ ಜಾವ 2:23 ಕ್ಕೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹಾಗೂ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಒಂದು ತಿಂಗಳ ಹಿಂದೆಯಷ್ಟೇ 8.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ, ಸುನಾಮಿ ಉಂಟಾಗಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆ, ಸುನಾಮಿ ಆತಂಕ ಎದುರಾಗಿದೆ.
ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯ ಬಳಿ ಭೂಕಂಪ ಸಂಭವಿಸಿದೆ. 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಸದ್ಯ ಭೂಕಂಪದಿಂದ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸುನಾಮಿ ಆತಂಕ ಎದುರಾಗಿದ್ದು, ಅಧಿಕಾರಿಗಳು ತಕ್ಷಣದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.