ಕಠ್ಮಂಡು, ಸೆ. 12 (DaijiworldNews/AA): ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಿ ಇಂದು ರಾತ್ರಿ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಜನರಲ್-ಝಡ್ ಪ್ರತಿಭಟನಾಕಾರರು, ಅಧ್ಯಕ್ಷ ರಾಮಚಂದ್ರ ಪೌಡೆಲ್ ಮತ್ತು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ನಡುವಿನ ಒಮ್ಮತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಸ್ತುವಾರಿ ಸರ್ಕಾರದಲ್ಲಿ ಕರ್ಕಿ ಅವರ ಸಂಪುಟ ಚಿಕ್ಕದಾಗಿರಲಿದೆ. ಮೊದಲ ಸಭೆ ಶುಕ್ರವಾರ ರಾತ್ರಿಯೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟವು ಫೆಡರಲ್ ಸಂಸತ್ತಿನ ಜೊತೆಗೆ 7 ಪ್ರಾಂತೀಯ ಸಂಸತ್ತುಗಳನ್ನು ವಿಸರ್ಜಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್ ಭವನಕ್ಕೆ ನುಗ್ಗಿದ ಜನರು ಅವುಗಳನ್ನು ಧ್ವಂಸಗೊಳಿಸಿದರು. ಜನತೆ ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಸದ್ಯ ನೇಪಾಳ ಹಿಂಸಾಚಾರವನ್ನು ಸೇನೆ ನಿಯಂತ್ರಣಕ್ಕೆ ತಂದಿದೆ.