ವಾಷಿಂಗ್ಟನ್, ಸೆ. 08 (DaijiworldNews/AA): ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಬೇಡಿ ಎಂದು ಹೇಳಿದ್ದಕ್ಕೆ ಹರಿಯಾಣದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಹರಿಯಾಣದ ಜಿಂದ್ ಜಿಲ್ಲೆಯ ಬರಾಹ್ ಕಲಾ ಗ್ರಾಮದ ಕಪಿಲ್ (26) ಕೊಲೆಯಾದ ಯುವಕ. ಕಪಿಲ್ ಮೂರು ವರ್ಷದ ಹಿಂದೆಯೇ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು.
ಘಟನೆಯ ಹಿನ್ನೆಲೆ
ಕಪಿಲ್ ಕೆಲಸ ಮಾಡುತ್ತಿದ್ದ ಸ್ಟೋರ್ನ ಹೊರಗಡೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಪಿಲ್ ಆತನ ಬಳಿ, ಸಾರ್ವಜನಿಕ ಸ್ಥಳವಾದ ಇಲ್ಲಿ ಮೂತ್ರ ವಿಸರ್ಜಿಸಬೇಡ ಎಂದಿದ್ದರು. ಈ ವೇಳೆ ಕೋಪಗೊಂಡ ವ್ಯಕ್ತಿ ಕಪಿಲ್ನ ಮೇಲೆ ಗುಂಡಿನ ದಾಳಿ ನಡೆಸಿದ್ದ.
ತಕ್ಷಣವೇ ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಕಪಿಲ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಪಿಲ್ ಕೊನೆಯುಸಿರೆಳೆದಿದ್ದಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ತಂದೆ, ತಾಯಿ ಕಂಗಾಲಾಗಿದ್ದಾರೆ. ಕಪಿಲ್ ಬಡ ಕುಟುಂಬದಲ್ಲಿ ಜನಿಸಿದ್ದ. ಕಪಿಲ್ನನ್ನು ಸಾಲ ಮಾಡಿ ಅಮೆರಿಕಕ್ಕೆ ಕಳುಹಿಸಿದ್ದರು. ಇದೀಗ ಮಗನ ಸಾವಿನ ಸುದ್ದಿ ತಿಳಿದು ಆಘಾತವುಂಟಾಗಿದೆ.