ಕಠ್ಮಂಡು, ಸೆ. 08 (DaijiworldNews/AA): ಫೇಸ್ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳನ್ನು ನಿಷೇಧ ಮಾಡಿದ ಹಿನ್ನೆಲೆ ಸರ್ಕಾರದ ವಿರುದ್ಧ ನೇಪಾಳದ ಜನತೆ ಸಿಡಿದೆದ್ದಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನಾಕಾರರು ಬೀದಿಗಿಳಿದಾಗ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೋಪಗೊಂಡ ಪ್ರತಿಭಟನಾಕಾರರು ಕರ್ಫ್ಯೂ ನಿರ್ಬಂಧಗಳನ್ನು ಮುರಿದು ಸಂಸತ್ತಿನ ಬಳಿಯ ನಿರ್ಬಂಧಿತ ವಲಯಗಳನ್ನು ಪ್ರವೇಶಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನೇಪಾಳ ರಾಜಧಾನಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ.
ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡು ಸಿಡಿಸಿದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಸಂಸತ್ತಿನ ಆವರಣವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.
"ಕರ್ಫ್ಯೂ ಮಧ್ಯಾಹ್ನ 12:30 ರಿಂದ ರಾತ್ರಿ 10:00 ರವರೆಗೆ (ಸ್ಥಳೀಯ ಸಮಯ) ಜಾರಿಯಲ್ಲಿದೆ. ಈ ವಲಯಗಳಲ್ಲಿ ಸಾರ್ವಜನಿಕರ ಓಡಾಟ, ಸಭೆ ಸೇರುವುದು, ಪ್ರತಿಭಟನೆಗಳು ಅಥವಾ ಸುತ್ತುವರಿದ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ" ಎಂದು ಮುಖ್ಯ ಜಿಲ್ಲಾ ಅಧಿಕಾರಿ ಛಬಿಲಾಲ್ ರಿಜಾಲ್ ತಿಳಿಸಿದ್ದಾರೆ.
ನೇಪಾಳ ಸರ್ಕಾರ ನೋಂದಾಯಿತ 26 ಪ್ಲಾಟ್ಫಾರ್ಮ್ಗಳನ್ನು ಬ್ಯಾನ್ ಮಾಡಿದೆ. ಇಲ್ಲಿನ ಜನತೆಗೆ ಯೂಟ್ಯೂಬ್, ಎಕ್ಸ್, ಫೇಸ್ಬುಕ್ ಸೈಟ್ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಯುವ ನೇಪಾಳಿಗಳು ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿ, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರದ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.