ವಾಷಿಂಗ್ಟನ್, ಆ. 25 (DaijiworldNews/TA): ಭಾರತ-ಅಮೆರಿಕ ಸಂಬಂಧಗಳಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಗೊಂದಲದ ನಡುವೆಯೇ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಪ್ತ ಸಹಚರ ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ಮುಂದಿನ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಇದನ್ನು ಸ್ವತಃ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದು, ಸೆರ್ಗಿಯೊ ಗೋರ್ ಅವರು ಅಮೆರಿಕದ ಭಾರತದ ರಾಯಭಾರಿ ಹಾಗು ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಸೆರ್ಗಿಯೊ ಗೋರ್ ಈಗಾಗಲೇ ಶ್ವೇತಭವನದ ಅಧ್ಯಕ್ಷೀಯ ಕಚೇರಿಯಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಟ್ರಂಪ್ ಅವರ ಆಪ್ತ ಸಲಹೆಗಾರರಾಗಿದ್ದು, ಟ್ರಂಪ್ ಅವರಿಗೆ ಅತ್ಯಂತ ನಂಬಿಕಸ್ತರಲ್ಲೊಬ್ಬರಾಗಿದ್ದಾರೆ. ತಮ್ಮ ಘೋಷಣೆಯಲ್ಲಿ ಟ್ರಂಪ್, "ಸೆರ್ಗಿಯೊ ನನ್ನ ಅತ್ಯುತ್ತಮ ಸ್ನೇಹಿತ. ಅವರು ದೇಶ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದು, ಅವರ ನೇಮಕದಿಂದ ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ" ಎಂದು ಕೊಂಡಾಡಿದ್ದಾರೆ.
ಇದುವರೆಗೆ ಭಾರತದಲ್ಲಿನ ಅಮೆರಿಕದ ರಾಯಭಾರಿ ಸ್ಥಾನವನ್ನು ಎರಿಕ್ ಗಾರ್ಸೆಟ್ಟಿ ನಿರ್ವಹಿಸುತ್ತಿದ್ದು, ಇದೀಗ ಅವರ ಸ್ಥಾನಕ್ಕೆ ಸೆರ್ಗಿಯೊ ಗೋರ್ ಬದಲಾಗಲಿದ್ದಾರೆ. ಆದರೆ, ಈ ನೇಮಕತಿಗೆ ಇನ್ನೂ ಸೆನೆಟ್ನ ಅಧಿಕೃತ ಅನುಮೋದನೆ ಅಗತ್ಯವಿದ್ದು, ಅದುವರೆಗೆ ಗೋರ್ ತಮ್ಮ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಟ್ರಂಪ್ ಅಧ್ಯಕ್ಷರಾಗಿದ್ದ ಕಾಲದಲ್ಲಿ, ಸೆರ್ಗಿಯೊ ಅವರು ಅಧ್ಯಕ್ಷೀಯ ಸಿಬ್ಬಂದಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಸುಮಾರು 4000 ದೇಶಪ್ರೇಮಿಗಳ ನೇಮಕಾತಿಗೆ ನೇರವಾಗಿ ಸಂಬಂಧ ಹೊಂದಿದ್ದರು ಎಂದು ಟ್ರಂಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ವೇತಭವನದಲ್ಲಿ ನಡೆದಿರುವ ಹಲವು ಪ್ರಮುಖ ನಿರ್ಧಾರಗಳಲ್ಲಿ ಸೆರ್ಗಿಯೊ ಅವರ ಪಾತ್ರ ಮಹತ್ವಪೂರ್ಣವಾಗಿದ್ದು, ಟ್ರಂಪ್ ಅವರು ಅವರ ನಿಷ್ಠೆ ಮತ್ತು ಕಾರ್ಯನಿಷ್ಠೆ ಬಗ್ಗೆ ಪುನಃ ಪುನಃ ಹೊಗಳಿದ್ದಾರೆ.
ಕಳೆದ ಕೆಲವು ಸಮಯದಿಂದ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಸಣ್ಣಪುಟ್ಟ ಬಿರುಕುಗಳು ಗೋಚರಿಸುತ್ತಿದ್ದು, ವಿಶೇಷವಾಗಿ ಸುಂಕ ಸಮರ ಹಾಗೂ ‘ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ’ ಎಂಬ ಟ್ರಂಪ್ ಅವರ ಹೇಳಿಕೆಗಳಿಂದ ಸಂಬಂಧ ಹಳಸುವತ್ತ ಸಾಗಿದವು. ಇಂಥ ತೀವ್ರ ರಾಜಕೀಯ ಸಂವೇದನಾತ್ಮಕ ಸಂದರ್ಭದಲ್ಲಿ ಟ್ರಂಪ್ ತಮ್ಮ ನಿಕಟವರ್ತಿಯೊಬ್ಬರನ್ನು ಭಾರತಕ್ಕೆ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಗಮನ ಸೆಳೆದಿದೆ.
ಇನ್ನು ಮುಂದಿನ ಹಂತದಲ್ಲಿ ಸೆನೆಟ್ ಅವರ ಆಯ್ಕೆ ಅಂಗೀಕರಿಸಿದರೆ, ಸೆರ್ಗಿಯೊ ಗೋರ್ ಭಾರತದ ನವ ರಾಯಭಾರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತ-ಅಮೆರಿಕ ಬಾಂಧವ್ಯದ ಭವಿಷ್ಯದಲ್ಲಿ ಅವರು ಯಾವ ರೀತಿಯ ಪಾತ್ರವಹಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.