ಯುನೈಟೆಡ್ ಸ್ಟೇಟ್ಸ್, ಆ. 21 (DaijiworldNews/AK): ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ನೊಂದಿಗೆ ದೀರ್ಘಕಾಲದ ಹೋರಾಟದ ನಂತರ ಖ್ಯಾತ ನಿವೃತ್ತ ಮುನಿಸಿಪಲ್ ನ್ಯಾಯಾಲಯದ ನ್ಯಾಯಾಧೀಶ ಮತ್ತು ವೈರಲ್ ಟಿವಿ ತಾರೆ ಫ್ರಾಂಕ್ ಕ್ಯಾಪ್ರಿಯೊ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅವರ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಅವರ ಮರಣವನ್ನು ದೃಢಪಡಿಸಿದ್ದು, ಮೇದೋಜೀರಕ ಕ್ಯಾನ್ಸರ್ನೊಂದಿಗೆ ದೀರ್ಘ ಹೋರಾಟದ ನಂತರ ಅವರು ನಿಧನರಾದರು ಎಂದು ಹೇಳಲಾಗಿದೆ. ನಿಧನದ ಒಂದು ದಿನ ಮೊದಲು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಫ್ರಾಂಕ್ ಕ್ಯಾಪ್ರಿಯೊ, ನನಗೆ ಆಸ್ಪತ್ರೆಯಲ್ಲಿ ಹಿನ್ನಡೆಯಾಗಿದ್ದು, ನನ್ನನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಸ್ಮರಿಸಿ ಎಂದು ಹೇಳಿದ್ದರು.
ತಮ್ಮ ಸಹಾನುಭೂತಿಯ ವಿಚಾರಣೆಯಿಂದ ನ್ಯಾಯಾಲಯದ ಆವರಣದಲ್ಲಿ ಭಾರಿ ಪ್ರೀತಿಪಾತ್ರರಾಗಿದ್ದ ಫ್ರಾಂಕ್ ಕ್ಯಾಪ್ರಿಯೊ, ವೈಯಕ್ತಿಕ ಸಮಸ್ಯೆಗಳಿಗೆ ಸಹಾನುಭೂತಿ ತೋರುತ್ತಿದ್ದರು ಹಾಗೂ ತೀರಾ ಕಡಿಮೆ ಅಪರಾಧದ ಪ್ರಕರಣಗಳನ್ನು ಮಾನವೀಯ ನೆಲೆಯಲ್ಲಿ ವಜಾಗೊಳಿಸುತ್ತಿದ್ದರು. ಅವರ ನಡವಳಿಕೆಯು ಅವರಿಗೆ ʼಅಕ್ಕರೆಯ ನ್ಯಾಯಾಧೀಶʼ ಎಂಬ ಮನ್ನಣೆಯನ್ನು ತಂದು ಕೊಟ್ಟಿತ್ತು. ಕ್ಯಾಪ್ರಿಯೊ, 2018 ಮತ್ತು 2020 ರ ನಡುವೆ ಪ್ರಸಾರವಾದ ತನ್ನ ಕೋರ್ಟ್ರೂಮ್ ಆಧಾರಿತ ರಿಯಾಲಿಟಿ ಸರಣಿ ಕಾಟ್ ಇನ್ ಪ್ರಾವಿಡೆನ್ಸ್ ಮೂಲಕ ಅಂತರರಾಷ್ಟ್ರೀಯ ಮೆಚ್ಚುಗೆಗೆ ಪಾತ್ರರಾದರು.
ದಶಕಗಳ ಸಾರ್ವಜನಿಕ ಸೇವೆಯ ನಂತರ, ಕ್ಯಾಪ್ರಿಯೊ 2023 ರಲ್ಲಿ ಪ್ರಾವಿಡೆನ್ಸ್ ಮುನ್ಸಿಪಲ್ ನ್ಯಾಯಾಲಯದ ಪೀಠದಿಂದ ನಿವೃತ್ತರಾದರು. ಅವರು ಪತ್ನಿ ಜಾಯ್ಸ್, ಐದು ಮಕ್ಕಳು, ಏಳು ಮೊಮ್ಮಕ್ಕಳು ಮತ್ತು ಇಬ್ಬರು ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.