ವಾಷಿಂಗ್ಟನ್, ಜು. 17 (DaijiworldNews/AK): ಅಮೆರಿಕದ ಅಲಾಸ್ಕಾದಲ್ಲಿ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಸಮುದ್ರದ 36 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಅಲಾಸ್ಕಾ ಪರ್ಯಾಯ ದ್ವೀಪದ ಸ್ಯಾಂಡ್ ಪಾಯಿಂಟ್ನಿಂದ 87 ಕಿ.ಮೀ ದೂರದಲ್ಲಿ ಇದರ ಕೇಂದ್ರ ಬಿಂದು ಇತ್ತು ಎಂದು ಎನ್ಸಿಎಸ್ ಮಾಹಿತಿ ನೀಡಿದೆ. ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಹಾಗೂ ಪರ್ಯಾಯ ದ್ವೀಪದ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಸಮುದ್ರದ ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪ ಇದಾಗಿದ್ದು, ಇಂತಹ ಭೂಕಂಪಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ. ಈ ಹಿನ್ನೆಲೆ ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳಬೇಕು. ಕಡಲತೀರದಿಂದ ದೂರವಿರಬೇಕು ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರ ಎಚ್ಚರಿಕೆ ನೀಡಿದೆ.
ಮಾರ್ಚ್ 1964 ರಲ್ಲಿ ಈ ದೂರದ ರಾಜ್ಯವು 9.2 ತೀವ್ರತೆಯ ಭೂಕಂಪದಿಂದ ಹಾನಿಗೊಳಗಾಯಿತು, ಇದು ಉತ್ತರ ಅಮೆರಿಕಾದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪವಾಗಿದೆ.ಇದು ಆಂಕಾರೇಜ್ ನಗರವನ್ನು ಧ್ವಂಸ ಮಾಡಿತು ಮತ್ತು ಅಲಾಸ್ಕಾ ಕೊಲ್ಲಿ, ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಹವಾಯಿಯನ್ನು ಅಪ್ಪಳಿಸಿದ ಸುನಾಮಿಯನ್ನು ಸೃಷ್ಟಿಸಿತು. ಭೂಕಂಪ ಮತ್ತು ಸುನಾಮಿಯಿಂದ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.