ಬಲೂಚಿಸ್ತಾನ, ಜು. 11 (DaijiworldNews/AA): ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಸ್ತ್ರ ಸಜ್ಜಿತ ವ್ಯಕ್ತಿಗಳು ಬಸ್ ಪ್ರಯಾಣಿಕರನ್ನು ಅಪಹರಿಸಿ, 9 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸಂಭವಿಸಿದೆ.

ಪ್ರಾಂತ್ಯದ ಝೋಬ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಶಸ್ತ್ರಸಜ್ಜಿತ ದಂಗೆಕೋರರು ಅವರಲ್ಲಿ 9 ಮಂದಿಯನ್ನು ಕ್ವೆಟ್ಟಾದಿಂದ ಲಾಹೋರ್ಗೆ ಹೋಗುತ್ತಿದ್ದ ಬಸ್ನಿಂದ ಇಳಿಸಿದರು. ಈ 9 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಅವರೆಲ್ಲರೂ ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆಗಾಗಿ ನಾವು ಒಂಬತ್ತು ಶವಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಸಹಾಯಕ ಆಯುಕ್ತ ಝೋಬ್ ನವೀದ್ ಆಲಂ ಮಾಹಿತಿ ನೀಡಿದ್ದಾರೆ.
ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಆದರೆ ಹಿಂದೆ, ಬಲೂಚ್ ಭಯೋತ್ಪಾದಕ ಗುಂಪುಗಳು ಬಲೂಚಿಸ್ತಾನದ ವಿವಿಧ ಹೆದ್ದಾರಿಗಳಲ್ಲಿ ಚಲಿಸುವ ಪಂಜಾಬ್ ಪ್ರಾಂತ್ಯದ ಜನರು ಮತ್ತು ಪ್ರಯಾಣಿಕ ಬಸ್ಗಳನ್ನು ಗುರಿಯಾಗಿಸಿಕೊಂಡು ಇಂತಹ ದಾಳಿಗಳನ್ನು ನಡೆಸಿದೆ.
ಕ್ವೆಟ್ಟಾ, ಲೊರಾಲೈ ಮತ್ತು ಮಸ್ತುಂಗ್ನಲ್ಲಿ ದಂಗೆಕೋರರು ಇತರ ಮೂರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ. ಆದರೆ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್, ಭದ್ರತಾ ಪಡೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸಿದವು ಎಂದು ತಿಳಿಸಿದ್ದಾರೆ.
ದಂಗೆಕೋರರು ರಾತ್ರಿಯ ಸಮಯದಲ್ಲಿ ಪ್ರಾಂತ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಚೆಕ್ ಪೋಸ್ಟ್ಗಳು, ಸರ್ಕಾರಿ ಸ್ಥಾಪನೆಗಳು, ಪೊಲೀಸ್ ಠಾಣೆಗಳು, ಬ್ಯಾಂಕುಗಳು ಮತ್ತು ಟವ್ ಮೇಲೆ ದಾಳಿ ಮಾಡಿದ್ದಾರೆ.