ವ್ಯಾಟಿಕನ್ ನಗರ, ಮೇ. 08 (DaijiworldNews/TA): 132 ಕಾರ್ಡಿನಲ್ಸ್ ಭಾಗವಹಿಸಿದ್ದ ಕಾಂಕ್ಲೇವ್ ನಲ್ಲಿ ನೂತನ ಪೋಪ್ ಅವರನ್ನು ಆಯ್ಕೆ ಮಾಡಲಾಗಿದೆ. ವಾಟಿಕನ್ ಸಿಟಿಯಲ್ಲಿರುವ ಸಿಸ್ಟೀನ್ ಚಾಪೆಲ್ ಚಿಮಣಿಯಿಂದ ಶ್ವೇತ ವರ್ಣದ ಹೊಗೆ ಹೊರಹೊಮ್ಮುತ್ತಿದ್ದಂತೆ ಸೇಂಟ್ ಪೀಟರ್ಸ್ ಚೌಕದಲ್ಲಿ ಸೇರಿದ್ದ ಸಾವಿರಾರು ಕ್ರೈಸ್ತ ವಿಶ್ವಾಸಿಗಳು ನೂತನ ಪೋಪ್ ಆಯ್ಕೆಯನ್ನು ಸಂಭ್ರಮಿಸಿದರು.

ಹೊಸದಾಗಿ ಆಯ್ಕೆಯಾದ ಪೋಪ್ ತ್ವರಿತವಾಗಿ ಸಾಂಪ್ರದಾಯಿಕ ಪಾಪಲ್ ವಸ್ತ್ರಗಳನ್ನು ಧರಿಸಿ, ಅವರ ಪವಿತ್ರ ಕಚೇರಿಗೆ ಸಾಂಕೇತಿಕ ಹೆಜ್ಜೆ ಇಡಲಿದ್ದಾರೆ. ಹಿರಿಯ ಕಾರ್ಡಿನಲ್ ಡಿಯಕನ್ ಸೇಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಐತಿಹಾಸಿಕ ಧಾರ್ಮಿಕ ಘೋಷಣೆ ಉದ್ಘರಿಸುತ್ತಾ ಹೊರಬರಲಿದ್ದಾರೆ.
"ಹ್ಯಾಬೆಮಸ್ ಪಾಪಮ್" ("ನಮಗೆ ಪೋಪ್ ಇದ್ದಾರೆ"), ಎಂಬ ಘೋಷಣೆಗಳು ಹೊರಹೊಮ್ಮುತ್ತಿದ್ದಂತೆ ಪೋಪ್ ಅವರ ಜನ್ಮ ಹೆಸರು ಮತ್ತು ಅವರು ಆಯ್ಕೆ ಮಾಡಿದ ಪಾಪಲ್ ಹೆಸರನ್ನು ಘೋಷಿಸಿಲಾಗುವುದು. ಸಾಂಪ್ರಾದಯಿಕ ಧಾರ್ಮಿಕ ವಿಧಿಗಳ ನಂತರ ಹೊಸ ಪೋಪ್ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳುವರು. ಇದನ್ನು ಉರ್ಬಿ ಎಟ್ ಓರ್ಬಿ ("ನಗರ ಮತ್ತು ಜಗತ್ತಿಗೆ") ಎಂದು ಕರೆಯಲಾಗುತ್ತದೆ.
ಚುನಾವಣೆಯ ನಂತರ ಪೋಪ್ ಯಾವಾಗ ಕಾಣಿಸಿಕೊಳ್ಳಬೇಕು ಎಂಬುದಕ್ಕೆ ಯಾವುದೇ ಕಟ್ಟುನಿಟ್ಟಾದ ಸಮಯ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಆದಾಗ್ಯೂ, ಸಾಂಪ್ರದಾಯಿಕವಾಗಿ, ಬಿಳಿ ಹೊಗೆ ಬಿಡುಗಡೆಯಾದ 30 ರಿಂದ 60 ನಿಮಿಷಗಳ ಒಳಗೆ ಘೋಷಣೆ ಮತ್ತು ಮೊದಲ ಪ್ರದರ್ಶನ ಸಂಭವಿಸುತ್ತದೆ, ಇದು ಸಿದ್ಧತೆಗಳು ಎಷ್ಟು ಸರಾಗವಾಗಿ ನಡೆಯುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.