ಇಸ್ಲಾಮಾಬಾದ್, ಏ.30 (DaijiworldNews/AA): ಪಾಕಿಸ್ತಾನ ವಿರುದ್ಧ ಮಿಲಿಟರಿ ಕ್ರಮಕ್ಕೆ ಭಾರತ ಮುಂದಾಗುತ್ತಿದೆ. ಮುಂದಿನ 24-36 ಗಂಟೆಗಳಲ್ಲಿ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿದೆ ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ತಿಳಿಸಿದ್ದಾರೆ.

ಭಾರತ ಮಿಲಿಟರಿ ದಾಳಿಯನ್ನು ಯೋಜಿಸುತ್ತಿದೆ ಎಂದು ಸೂಚಿಸುವ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯನ್ನು ನಾವು ಹೊಂದಿದ್ದೇವೆ. ಅಲ್ಲದೇ, ಸೇನಾ ಕ್ರಮ ಕೈಗೊಂಡರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪ ಆಧಾರರಹಿತವಾದದ್ದು. ಕಪೋಲಕಲ್ಪಿತ ಆರೋಪಗಳ ಆಧಾರದ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಭಾರತ ಸ್ವತಃ ತಾನೇ ತೀರ್ಪುಗಾರನಂತೆ ವರ್ತಿಸುತ್ತಿದೆ. ಜವಾಬ್ದಾರಿಯುತ ರಾಷ್ಟ್ರವಾಗಿ ಸತ್ಯವನ್ನು ಖಚಿತಪಡಿಸಿಕೊಳ್ಳಲು ತಜ್ಞರ ಆಯೋಗಕ್ಕೆ ವಿಶ್ವಾಸಾರ್ಹ, ಪಾರದರ್ಶಕ ಹಾಗೂ ಸ್ವತಂತ್ರ ತನಿಖೆ ನಡೆಸಲು ಪಾಕಿಸ್ತಾನ ಮುಕ್ತ ಅವಕಾಶ ನೀಡಿದೆ. ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶುವಾಗಿದೆ ಎಂದಿದ್ದಾರೆ.